ಮ್ಯಾಡ್ರಿಡ್:ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಈಗಾಗಲೇ ಲಕ್ಷಾಂತರ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದರ ಮಧ್ಯೆ ಹಗಲು-ರಾತ್ರಿ ಲೆಕ್ಕ ಹಾಕದೇ ವೈದ್ಯರು, ನರ್ಸ್ ಹಾಗೂ ಇತರೆ ಸಿಬ್ಬಂದಿ ಸೋಂಕಿತರ ಪ್ರಾಣ ಉಳಿಸುವ ಕೆಲಸ ಮಾಡ್ತಿದ್ದಾರೆ.
ಗೋಲ್ಡನ್ ಗರ್ಲ್ ಕ್ಯಾರೊಲಿನ್ ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಲು ಎಲ್ಲರೂ ತಮ್ಮ ಕೈಯಿಂದ ಆದಷ್ಟು ಸಹಾಯ ಮಾಡುತ್ತಿದ್ದು, ಇದೀಗ ಒಲಿಂಪಿಕ್ಸ್ನ ವಿಶ್ವ ಚಾಂಪಿಯನ್ ಷಟ್ಲರ್ ಕ್ಯಾರೊಲಿನ್ ಮರಿನ್ ಕೂಡ ಸಹಾಯ ಮಾಡಲು ನಿರ್ಧರಿಸಿದ್ದು, ತಾವು ಗೆದ್ದಿರುವ ಪದಕ ವೈದ್ಯಕೀಯ ಸಿಬ್ಬಂದಿಗೆ ನೀಡಲು ಮುಂದಾಗಿದ್ದಾರೆ.
2016ರ ರಿಯೋ ಒಲಂಪಿಕ್ನಲ್ಲಿ ಭಾರತದ ಷಟ್ಲರ್ ಪಿವಿ ಸಿಂದು ಮಣಿಸಿ, ಚಿನ್ನದ ಪದಕ ಗೆದ್ದಿದ್ದ ಕ್ಯಾರೊಲಿನ್, ತಾವು ಗೆದ್ದಿರುವ ಎಲ್ಲ ಪ್ರಶಸ್ತಿ ನೀಡಲು ನಿರ್ಧರಿಸಿದ್ದಾರೆ.
ಕೊರೊನಾ ವಾರಿಯರ್ಸ್ಗೆ ಕೃತಜ್ಞತೆ ಮ್ಯಾಡ್ರಿಡ್ನಲ್ಲಿನ ವಿರ್ಗೆನ್ ಡೆಲ್ ಮಾರ್ ಆಸ್ಪತ್ರೆ ವೈದ್ಯ ಸಿಬ್ಬಂದಿ ಜತೆ ವಿಡಿಯೋ ಕಾಲ್ನಲ್ಲಿ ಮಾತನಾಡಿರುವ ಅವರು, ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ನೀವೂ ನಿಜವಾದ ಹೀರೋಗಳು ಎಂದಿದ್ದಾರೆ. ಇದೇ ವೇಳೆ ತಾವು ಗೆದ್ದಿರುವ ಎಲ್ಲ ಪದಕ ನೀಡುವುದಾಗಿ ಘೋಷಣೆ ಮಾಡಿದ್ದಾರೆ.ಇಂತಹ ಭಯಾನಕ ಸಮಯದಲ್ಲಿ ನಿಮ್ಮ ಕೆಲಸ ನಿಜಕ್ಕೂ ಸ್ಪೂರ್ತಿದಾಯಕ. ಅನಾರೋಗ್ಯ ಪೀಡಿತರನ್ನ ನೋಡಿಕೊಳ್ಳುವ ಮೂಲಕ ಅವರಿಗೆ ಧೈರ್ಯ ತುಂಬುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದಿರುವ ಕ್ಯಾರೊಲಿನ್, ನಿಮ್ಮ ಪ್ರಾಣ ಪಣಕ್ಕಿಟ್ಟು ನಮ್ಮಂತಹ ಜನರ ಸೇವೆ ಸಲ್ಲಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ಕ್ಯಾರೊಲಿನ್ 2016ರ ಒಲಿಂಪಿಕ್ನಲ್ಲಿ ಚಿನ್ನ, 3 ಸಲ ವಿಶ್ವ ಚಾಂಪಿಯನ್ ಹಾಗೂ 4 ಸಲ ಯುರೋಪಿಯನ್ ಚಾಂಪಿಯನ್ಷಿಪ್ನಲ್ಲಿ ಗೆಲುವು ದಾಖಲು ಮಾಡಿದ್ದು, ಅನೇಕ ಚಿನ್ನದ ಪದಕ ಗೆದ್ದಿದ್ದಾರೆ.