ವೆಲ್ವಾ(ಸ್ಪೇನ್):ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ವಿಶ್ವ ಚಾಂಪಿಯನ್ಶಿಪ್ನ ಮೊದಲ ಪಂದ್ಯದಲ್ಲಿ ಸ್ಪೇನ್ನ ಪಬ್ಲೋ ಏಬಿಯನ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ 28 ವರ್ಷದ ಶ್ರೀಕಾಂತ್ ಏಬಿಯನ್ ವಿರುದ್ಧ 21-12, 21-16ರಲ್ಲಿ ಕೇವಲ 36 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.
ಆರಂಭದಿಂದಲೇ ಆಕ್ರಮಣ ಆಟಕ್ಕೆ ಮುಂದಾದ ಶ್ರೀಕಾಂತ್ 11-2ರಲ್ಲಿ ಮುನ್ನಡೆ ಪಡೆದುಕೊಂಡರು. ಪಬ್ಲೋ ಕಮ್ಬ್ಯಾಕ್ ಮಾಡುವುದಕ್ಕೆ ಪ್ರಯತ್ನಿಸಿದರಾದರೂ ಭಾರತೀಯನ ವಿರುದ್ಧ 12-21 ರಲ್ಲಿ ಸೋಲು ಕಂಡರು.
ಇನ್ನು ಎರಡನೇ ಗೇಮ್ನಲ್ಲಿ ಸ್ಪೇನ್ ಪ್ಲೇಯರ್ ಉತ್ತಮ ಆರಂಭ ಪಡೆದರಾದರೂ ಶ್ರೀಕಾಂತ್ ವಿರಾಮದ ವೇಳೆಗೆ ಸತತ 5 ಅಂಕಗಳನ್ನು ಪಡೆದು 11-7ರಲ್ಲಿ ಮುನ್ನಡೆ ಪಡೆದುಕೊಂಡರು. ನಂತರವೂ ತಮ್ಮ ಅಮೋಘ ಆಟ ಮುಂದುವರಿಸಿ 21-16ರಲ್ಲಿ 2ನೇ ಸೆಟ್ ಗೆದ್ದರು. ಎರಡನೇ ಸುತ್ತಿನಲ್ಲಿ ಶ್ರೀಕಾಂತ್ ಚೀನಾದ ಲಿ ಸೀ ಫೆಂಗ್ ವಿರುದ್ಧ ಆಡಲಿದ್ದಾರೆ. ಲೀ ಅಮೆರಿಕಾದ ಟಿಮೋತಿ ವಿರುದ್ಧ ಲ್ಯಾಮ್ ವಿರುದ್ಧ 21-6, 21-10ರಲ್ಲಿ ಗೆಲುವು ಸಾಧಿಸಿದ್ದಾರೆ.
ಆದರೆ, ಕಳೆದ ಬಾರಿಯ ಕಂಚಿನ ಪದಕ ವಿಜೇತ ಸಾಯಿ ಪ್ರಣೀತ್ 28ನೇ ಶ್ರೇಯಾಂಕದ ಮಾರ್ಕ್ ಕ್ಯಾಲ್ಜೋವ್ ವಿರುದ್ಧ 21-17, 7-21, 18-21ರಲ್ಲಿ ಸೋಲು ಕಂಡರು. ಯುವ ಶಟ್ಲರ್ ಲಕ್ಷ್ಯ ಸೇನ್ ಮೊದಲ ಸುತ್ತಿನ ಪಂದ್ಯದಲ್ಲಿ ಬೈ ಪಡೆದು 2ನೇ ಸುತ್ತು ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಪಿವಿ ಸಿಂಧು ಮಹಿಳೆಯರ ವಿಭಾಗದಲ್ಲಿ ಇಂದು ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಇದನ್ನೂ ಓದಿ:ಭಾರತ ತಂಡವನ್ನು ಕೊಹ್ಲಿ ಹಿಂದೆ ತಿರುಗಿ ನೋಡದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ: ರೋಹಿತ್ ಶರ್ಮಾ ಶ್ಲಾಘನೆ