ನವದೆಹಲಿ: ಒಲಿಂಪಿಕ್ಸ್ನಲ್ಲಿ ಸತತ ಎರಡನೇ ಪದಕ ಪಡೆಯುವ ಮೂಲಕ ಸಿಂಧು ಬ್ಯಾಡ್ಮಿಂಟನ್ ಕ್ರೀಡೆಯ ದಂತಕತೆಯಾಗುವ ಹಾದಿಯಲ್ಲಿ ತಮ್ಮ ಬೆಳವಣಿಗೆಯನ್ನು ಮುಂದುವರಿಸಿದರೆ, ಕಿಡಂಬಿ ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಪಡೆದು ನಾಲ್ಕು ವರ್ಷಗಳ ವೈಫಲ್ಯಕ್ಕೆ ತಿಲಾಂಜಲಿಯಾಡಿ 2021ಅನ್ನು ಅವಿಸ್ಮರಣೀಯವನ್ನಾಗಿರಿಸಿಕೊಂಡರು.
ಇವರಿಬ್ಬರ ಜೊತೆಗೆ ಲಕ್ಷ್ಯಸೇನ್ ಚೊಚ್ಚಲ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದು ತಾವೂ ಭಾರತದ ಭವಿಷ್ಯ ಎಂದು ಬ್ಯಾಡ್ಮಿಂಟನ್ ಜಗತ್ತಿಗೆ ತೋರಿಸಿಕೊಟ್ಟರು. ಆದರೆ ವೈಯಕ್ತಿಕವಾಗಿ ಯಶಸ್ಸು ಸಾಧಿಸಿದಷ್ಟು ಇಡೀ ತಂಡವಾಗಿ ಭಾರತ ತಂಡ ಪ್ರಸಕ್ತ ವರ್ಷದಲ್ಲಿ ವೈಫಲ್ಯ ಅನುಭವಿಸಿದೆ.
ಸಿಂಧು ಬ್ಯಾಕ್ ಟು ಬ್ಯಾಕ್ ಒಲಿಂಪಿಕ್ ಮೆಡಲ್ :ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿಪದಕ ಗೆದ್ದಿದ್ದ ಪಿವಿ ಸಿಂಧು ಟೋಕಿಯೋದಲ್ಲಿ ಒಂದು ವರ್ಷ ಮುಂದೂಡಿ 2021ರಲ್ಲಿ ನಡೆದ ಒಲಿಂಪಿಕ್ ಕೂಟದಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ವರ್ಷದ ಕೊನೆಯಲ್ಲಿ ನಡೆದ ವಿಶ್ವ ಟೂರ್ ಫೈನಲ್ಸ್ನಲ್ಲಿ ಬೆಳ್ಳಿಪದಕ ಪಡೆಯುವ ಮೂಲಕ 2021ಅನ್ನು ಅವಿಸ್ಮರಣೀಯವನ್ನಾಗಿಸಿಕೊಂಡರು.
2019ರ ವಿಶ್ವ ಚಾಂಪಿಯನ್ ಆಗಿರುವ ಸಿಂಧು ಕೋವಿಡ್ ಕಾರಣದಿಂದ ಅರ್ಹತಾ ಟೂರ್ನಿ ರದ್ದಾದರೂ ಒಲಿಂಪಿಕ್ಸ್ಗೆ ಶ್ರೇಯಾಂಕದ ಆಧಾರದ ಮೇಲೆ ನೇರ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕೊನೆಗೆ ಟೂರ್ನಿಯಲ್ಲಿ ಕಂಚು ಗೆದ್ದು ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ಮೊದಲ ಮಹಿಳೆ ಹಾಗೂ ಎರಡನೇ ಭಾರತೀಯ ಕ್ರೀಡಾಪಟು ಎನಿಸಿಕೊಂಡರು.
ಒಲಿಂಪಿಕ್ಸ್ ನಂತರ ಎರಡು ತಿಂಗಳ ಬ್ರೇಕ್ ಪಡೆದುಕೊಂಡ ಸಿಂಧು ನಂತರ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದರು. ಫ್ರೆಂಚ್ ಓಪನ್, ಇಂಡೋನೇಷ್ಯಾ ಮಾಸ್ಟರ್ ಮತ್ತು ಇಂಡೋನೇಷ್ಯಾ ಓಪನ್ನಲ್ಲಿ ಸೆಮಿಫೈನಲ್ ಬ್ಯಾಕ್ ಟು ಬ್ಯಾಕ್ ಸೆಮಿಫೈನಲ್ ಪ್ರವೇಶಿಸಿದರೆ, ವಿಶ್ವ ಟೂರ್ ಫೈನಲ್ಸ್ನಲ್ಲಿ ಬೆಳ್ಳಿ ಪದಕ ಗೆದ್ದರು. ಇದೇ ಹುರುಪಿನಲ್ಲಿ ತಮ್ಮ ವಿಶ್ವ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಕಣಕ್ಕಿಳಿದಿದ್ದ ಅವರು ಕ್ವಾರ್ಟರ್ ಫೈನಲ್ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದರು. ಆದರೆ ಸಂಪೂರ್ಣ ವರ್ಷದಲ್ಲಿ ಸಿಂಧು ಅಭೂತಪೂರ್ವ ಯಶಸ್ಸು ಸಾಧಿಸಿದರೆಂಬುದುವುದರಲ್ಲಿ ಎರಡು ಮಾತಿಲ್ಲ.
ಬಹುದೊಡ್ಡ ಸಾಧನೆಯೊಂದಿಗೆ ಫಾರ್ಮ್ಗೆ ಮರಳಿದ ಶ್ರೀಕಾಂತ್ :2017ರಲ್ಲಿ ಆಡಿದ 5 ಫೈನಲ್ಸ್ನಲ್ಲಿ 4 ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ ಸತತ 4 ವರ್ಷಗಳ ಕಾಲ ವೈಫಲ್ಯ ಅನುಭವಿಸಿದ್ದರು. ಒಂದು ಕಡೆ ಗಾಯ, ಮತ್ತೊಂದು ಕಡೆ ವೈಫಲ್ಯದ ಜೊತೆಗೆ ಫಿಟ್ನೆಸ್ ಸಮಸ್ಯೆ ಕಾಡಿತ್ತು. ಕೊನೆಗೆ ಶ್ರೀಕಾಂತ್ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿ ವೃತ್ತಿ ಜೀವನದ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದ್ದರು.