ಬ್ಯಾಂಕಾಕ್:ಷಟಲ್ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ವಿಭಾಗದ ಜೋಡಿ ಸಾತ್ವಿಕ್ ಸೈರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ (ಬಿಡಬ್ಲ್ಯುಎಫ್) ಬಿಡುಗಡೆ ಮಾಡಿದ ವಿಶ್ವ ಶ್ರೇಯಾಂಕದ ಪಟ್ಟಿಯಲ್ಲಿ ಅಗ್ರ 20ಕ್ಕೆ ಪ್ರವೇಶಿಸಿದ್ದಾರೆ.
ಸೈರಾಜ್ ಮತ್ತು ಅಶ್ವಿನಿ ಅವರು 16 ಸ್ಥಾನಗಳ ಜಿಗಿತ ಕಾಣುವ ಮೂಲಕ ಹೊಸದಾಗಿ ಬಿಡುಗಡೆಯಾದ ರ್ಯಾಂಕಿಂಗ್ನಲ್ಲಿ 19 ಸ್ಥಾನಕ್ಕೆ ತಲುಪಿದ್ದಾರೆ. ಚೀನಾದ ಜೆಂಗ್ ಸಿ ಮತ್ತು ಹುವಾಂಗ್ ಯಾ ಜೋಡಿ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಥಾಯ್ಲೆಂಡ್ನ ಸಪ್ಸಿರಿ ತೈರಟ್ಟನಾಚೈ ಮತ್ತು ಡೆಚಾಪೋಲ್ ಪುವಾರನುಕ್ರೊ ಜೋಡಿ ಒಂದು ಸ್ಥಾನ ಜಿಗಿತ ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ತಲುಪಿದೆ.
ಈ ಜೋಡಿ ಮಿಶ್ರ ಡಬಲ್ಸ್ನಲ್ಲಿ ಅಗ್ರ 20ಕ್ಕೆ ಪ್ರವೇಶಿಸಿದೆ. ಏಷ್ಯನ್ ಲೀಗ್ನಲ್ಲಿ ಅದ್ಭುತ ಪ್ರದರ್ಶನವೇ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ. ಅಭಿನಂದನೆಗಳು ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಟ್ವೀಟ್ ಮಾಡಿದೆ.
ಯೋನೆಕ್ಸ್ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ಸ್ಗೆ ತಲುಪಿದ ಸಂದರ್ಭದಲ್ಲಿ ಚೀನಾದ ಜೋಡಿ ಚಾಂಗ್ ತಕ್ ಚಿಂಗ್ ಮತ್ತು ಎನ್‌ಜಿ ವಿಂಗ್ ಯುಂಗ್ ವಿರುದ್ಧ ಸೋಲನುಭವಿಸಿದರು. ಆದರೆ, ಟಯೋಟಾ ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸೈರಾಜ್ ಮತ್ತು ಅಶ್ವಿನಿ ಜೋಡಿ ಥಾಯ್ಲೆಂಡ್ನ ಸಪ್ಸಿರಿ ತೈರಟ್ಟನಾಚೈ ಮತ್ತು ಡೆಚಾಪೋಲ್ ಪುವಾರನುಕ್ರೊ ವಿರುದ್ಧ ನಡೆದ ಪ್ರಬಲ ಹೋರಾಟದಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾದರು.
ಪುರುಷರ ಸಿಂಗಲ್ಸ್ ವಿಭಾಗದ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಜಿಗಿತ ಕಂಡಿರುವ ಕಿಡಂಬಿ ಶ್ರೀಕಾಂತ್ ಅಗ್ರ 13ರಲ್ಲಿದ್ದಾರೆ. ಸಾಯಿ ಪ್ರಣೀತ್ ಒಂದು ಸ್ಥಾನದಿಂದ ಇಳಿದು 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ.ಸಿಂಧು ತನ್ನ ಏಳನೇ ಸ್ಥಾನವನ್ನು ಕಾಯ್ದುಕೊಂಡರೆ, ಸೈನಾ ನೆಹ್ವಾಲ್ ಕೂಡ ಒಂದು ಸ್ಥಾನ ಜಿಗಿತ ಕಂಡು 19ನೇ ಸ್ಥಾನದಲ್ಲಿದ್ದಾರೆ. ಪುರುಷರ ಮಿಶ್ರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸೈರಾಜ್ ಜೋಡಿ 10ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.