ನವದೆಹಲಿ: ಭಾರತ ಹಾಕಿ ತಂಡ 2020ರ ಒಲಿಂಪಿಕ್ಸ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಮಂಗಳವಾರ ಒಲಿಂಪಿಕ್ಸ್ ಹಾಕಿ ಸ್ಪರ್ಧೆಯ ವೇಳಾಪಟ್ಟಿ ಬಿಡುಗಡೆಯಾಗಿದ್ದು ಭಾರತ ಪುರುಷರ ತಂಡ ಜುಲೈ 25 ರಂದು ನ್ಯೂಜಿಲ್ಯಾಂಡ್ ಎದುರಿಸಿದರೆ, ಮಹಿಳಾ ತಂಡ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
ಭಾರತ ತಂಡ ಹಾಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟಿನಾ, ವಿಶ್ವದ ನಂಬರ್ ಒನ್ ಆಸ್ಟ್ರೇಲಿಯಾ, ಸ್ಪೈನ್, ನ್ಯೂಜಿಲ್ಯಾಂಡ್ ಹಾಗೂ ಜಪಾನ್ ತಂಡಗಳೊಂದಿಗೆ ಪೂಲ್ ಎ ನಲ್ಲಿದೆ.
ಜುಲೈ 26ರಂದು ತನ್ನ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ, 28 ರಂದು ಸ್ಪೇನ್, ಜುಲೈ 30ರಂದು ಅರ್ಜೆಂಟಿನಾ ಹಾಗೂ ಜುಲೈ 31 ರಂದು ಜಪಾನ್ ವಿರುದ್ಧ ಸೆಣಸಾಡಲಿದೆ. ಆಗಸ್ಟ್ 2 ಕ್ವಾರ್ಟರ್ ಫೈನಲ್ ನಡೆದರೆ, ಸೆಮಿಫೈನಲ್ ಪಂದ್ಯಗಳು ಆಗಸ್ಟ್ 4 ರಂದು ನಡೆಯಲಿವೆ. ಆಗಸ್ಟ್ 6 ರಂದು ಕಂಚು ಹಾಗೂ ಚಿನ್ನದ ಪದಕಕ್ಕಾಗಿ ಹೋರಾಟ ನಡೆಯಲಿದೆ.
ಮಹಿಳೆಯರ ತಂಡ 27ರಂದು ಜರ್ಮನಿ, 29ರಂದ ಗ್ರೇಟ್ ಬ್ರಿಟನ್, 31 ರಂದು ಐರ್ಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ಆಗಸ್ಟ್ 1 ರಂದು ಸೆಣಸಾಡಲಿದೆ.