ಬಿಗ್ ಬಾಸ್ ಕನ್ನಡ ಸೀಸನ್-8 ರಲ್ಲಿ ನೀಡಿದ್ದ ಲಾಕ್‌ಡೌನ್ ಟಾಸ್ಕ್ ಯಶಸ್ವಿಗೊಳಿಸಲು ಮನೆಯ ಸದಸ್ಯರು ವಿಫಲರಾಗಿದ್ದರು. ಹೀಗಾಗಿ ಯಾರು ಈ ಟಾಸ್ಕ್ ಹಾಳು ಮಾಡಿದ್ದಾರೆ ಎಂಬುದನ್ನು ಪ್ರತಿಯೊಬ್ಬ ಸ್ಪರ್ಧಿಯೂ ಹೇಳಿ, ಸೂಕ್ತ ಕಾರಣ ನೀಡಿ ಅವರ ಮುಖಕ್ಕೆ ಮಸಿ ಬಳಿಯಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದ್ದರು.
ಅದರಂತೆ ಮನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ನಿಧಿಯನ್ನು ದೂರಿದ್ದಾರೆ. ಕ್ವಾರಂಟೈನ್ ಆಗಬೇಕಾಗಿದ್ದ ನಿಧಿ ಅದರಿಂದ ಹೊರ ಬಂದಿದ್ದರು. ಹಗ್ಗ ಹಿಡಿದು ಶಿಕ್ಷೆ ಪಡೆಯಬೇಕಿತ್ತು, ಆದರೆ ಹಗ್ಗವನ್ನೇ ಹಿಡಿಯಲಿಲ್ಲ. ಇದು ಟಾಸ್ಕ್ ರದ್ದಾಗಲು ಕಾರಣ ಎಂದು ಮನೆಯ ಹಲವು ಸದಸ್ಯರು ದೂರಿದ್ದಾರೆ.
ನಿಧಿ ಮುಖಕ್ಕೆ ಮಸಿ:
ಇನ್ನು ನಿಧಿ ಅವರು ಟಾಸ್ಕ್ಅನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಂಡು ಇಲ್ಲಸಲ್ಲದ ಆರೋಪ ಮಾಡಿದ್ದರು. ಈ ಹಿನ್ನೆಲೆ ನಿಧಿಗೆ ಹೆಚ್ಚು ಮಂದಿ ಮಸಿ ಬಳಿದಿದ್ದಾರೆ. ಆಟದಲ್ಲಿ ಕ್ರೀಡಾ ಸ್ಫೂರ್ತಿಗಿಂತ ಒಬ್ಬರನ್ನೊಬ್ಬರು ದೂರುವುದು, ಪರಚಾಡುವುದು, ಕಿತ್ತಾಟವೇ ಜಾಸ್ತಿಯಾಗಿತ್ತು. ಹಾಗಾಗಿ ಬಿಗ್ ಬಾಸ್ ಟಾಸ್ಕ್ ರದ್ದುಗೊಳಿಸಿ, ಸ್ಪರ್ಧಿಗಳಿಗೆ ಶಿಕ್ಷೆ ನೀಡಿದ್ದಾರೆ. ಲ್ಯಾಗ್ ಮಂಜು ದಿವ್ಯಾ ಅವರಿಗೆ ಮಸಿ ಬಳಿದಿದ್ದಾರೆ. ಅರವಿಂದ್, ಪ್ರಶಾಂತ್ ಸೇರಿದಂತೆ ಕೆಲ ಮಂದಿಗೆ ಮಸಿ ಬಳಿಯಲಾಗಿದೆ.
ಶಿವರಾತ್ರಿ ಆಚರಣೆ:
ಮಹಾಶಿವರಾತ್ರಿ ಅಂಗವಾಗಿ ಮನೆಯ ಸದಸ್ಯರು ಶಿವನ ಜಪ ಮಾಡಿದ್ದಾರೆ. ವಿಶ್ವನಾಥ್ 'ನೀಡು ಶಿವ, ನೀಡದಿರೂ ಶಿವಾ' ಹಾಡನ್ನು ಹಾಡುವ ಮೂಲಕ ಮನೆಯಲ್ಲಿ ಭಕ್ತಿಯ ಹೊಳೆ ಹರಿಸಿದರು. ಅಲ್ಲದೇ ಮನೆಯ ಎಲ್ಲಾ ಸದಸ್ಯರು ಒಟ್ಟಾಗಿ ಮಹಾಶಿವರಾತ್ರಿಗೆ ಶುಭ ಕೋರಿದರು.