'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ನಾಯಕಿ ಅಶ್ವಿನಿ ಅಮ್ಮನಾಗಿ ಕಿರುತೆರೆ ಪಯಣ ಆರಂಭಿಸಿದ ಯಮುನಾ ಶ್ರಿನಿಧಿ ಅರಮನೆ, ಮಾನಸ ಸರೋವರ, ಅಮೃತ ವರ್ಷಿಣಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ 'ಕಮಲಿ' ಧಾರಾವಾಹಿಯಲ್ಲಿ ನಾಯಕಿ ಕಮಲಿಯ ಅಮ್ಮ ಗೌರಿಯಾಗಿ ಅವರು ನಟಿಸುತ್ತಿದ್ದಾರೆ.
ನಟನೆ ಮಾತ್ರವಲ್ಲ, ಯಮುನಾ ಶ್ರೀನಿಧಿ ಅದ್ಭುತ ನೃತ್ಯಗಾರ್ತಿ ಎಂಬುದು ಹಲವರಿಗೆ ತಿಳಿದಿಲ್ಲ. ಕೇವಲ ಭಾರತ ಮಾತ್ರವಲ್ಲದೆ ದೂರದ ಅಮೆರಿಕಾದಲ್ಲೂ ಭರತನಾಟ್ಯದ ಕಂಪನ್ನು ಪಸರಿಸಿದ್ದ ಯಮುನಾ ಶ್ರಿನಿಧಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿರುವ ಅದ್ಭುತ ಪ್ರತಿಭೆ. ಬರೋಬ್ಬರಿ 15 ವರ್ಷಗಳ ಕಾಲ ಅಮೆರಿಕಾದಲ್ಲಿ ಭರತನಾಟ್ಯ ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಸಕ್ರಿಯವಾಗಿದ್ದ ಯಮುನಾ, 2012 ರಲ್ಲಿ ಭಾರತಕ್ಕೆ ಬಂದರು.
ಭಾರತಕ್ಕೆ ಬಂದ ನಂತರ ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಯಮುನಾ ಶ್ರೀನಿಧಿ, ಅಲ್ಲಿನ ವಿದ್ಯಾರ್ಥಿಗಳಿಗೆ ಸ್ಕೈಪ್ ಮೂಲಕ ಶಿಕ್ಷಣ ಮಾಡುವುದನ್ನು ಮಾತ್ರ ಮರೆತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ಆಗಿರುವ ಯಮುನಾ ಶ್ರೀನಿಧಿ ನವರಸಗಳ ಬಗ್ಗೆ ಮಾತನಾಡಿದ್ದಾರೆ. 'ಮಾನವನ ಅಭಿವ್ಯಕ್ತಿ ಭಾವಗಳು ಸಹಜ ಹಾಗೂ ಸಾರ್ವತ್ರಿಕವಾಗಿವೆ. ಮೂಲ ಭಾವನೆಗಳನ್ನು ತಿಳಿಸಲು ಎಲ್ಲಾ ಸಂಸ್ಕ್ರೃತಿಗಳಲ್ಲೂ ಮುಖದ ಅಭಿವ್ಯಕ್ತಿಗಳು ಒಂದೇ ಎಂದಿರುವ ಯಮುನಾ ಮನುಷ್ಯರಲ್ಲಿ ಭಾವನೆಗಳು ಒಂಭತ್ತು ಇವೆ ಮತ್ತು ಇವುಗಳನ್ನು ನವರಸ ಎಂದು ಕರೆಯಲಾಗುತ್ತದೆ.
ಶೃಂಗಾರ , ಹಾಸ್ಯ ,ಕರುಣ , ರೌದ್ರ , ವೀರ ,ಭಯಂಕರ , ಬೀಭತ್ಸ್ಯ , ಅದ್ಭುತ ಹಾಗೂ ಶಾಂತ ಅವುಗಳ ಹೆಸರು. ಇವುಗಳಲ್ಲಿ ಶೃಂಗಾರ ರಸ ಎಲ್ಲಾ ರಸಗಳ ತಾಯಿ ಎಂದು ಕರೆಸಿಕೊಂಡಿದ್ದು ಇದು ಇತರ ರಸಗಳಾದ ಭಯಂಕರ, ರೌದ್ರ , ಕರುಣ ಭಾವನೆಗಳ ವ್ಯಾಪ್ತಿಗೆ ಅವಕಾಶ ನೀಡುತ್ತದೆ. ಜೊತೆಗೆ ಹೆಚ್ಚಿನ ಭಾರತದ ಸಾಂಪ್ರದಾಯಿಕ ಕಲೆಗಳ ವಿಷಯವು ಮಹಿಳೆ ಹಾಗೂ ಪುರುಷರ ನಡುವಿನ ಸಂಬಂಧಗಳ ಸುತ್ತ ಸುತ್ತುತ್ತದೆ' ಎಂದು ಯಮುನಾ ಶ್ರೀನಿಧಿ ಬರೆದುಕೊಂಡಿದ್ದಾರೆ.