ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ನಾಯಕಿ ಪಾರು ಅಲಿಯಾಸ್ ಪಾರ್ವತಿ ಆಗಿ ಅಭಿನಯಿಸುತ್ತಿರುವ ಮೋಕ್ಷಿತಾ ಪೈ ಹಿರಿತೆರೆಗೆ ಕಾಲಿಟ್ಟಿರುವ ಸುದ್ದಿ ಹೊಸತೇನಲ್ಲ. ದುನಿಯಾ ವಿಜಯ್ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಮೋಕ್ಷಿತಾ ಆಯ್ಕೆಯಾಗಿರುವುದು ತಿಳಿದೇ ಇದೆ. ಇಷ್ಟು ದಿನ ಪಾರು ಆಗಿ ಮನೆ ಮಾತಾಗಿರುವ ಮೋಕ್ಷಿತಾ ಇದೀಗ ಹಿರಿತೆರೆಯಲ್ಲಿ ಕಮಾಲ್ ಮಾಡಲು ತಯಾರಾಗಿದ್ದಾರೆ.
ಸಿನಿಮಾದಲ್ಲಿ ಅವಕಾಶ ದೊರೆತ ಮೇಲೆ ಸೀರಿಯಲ್ ಕಥೆ ಏನು...ಇದಕ್ಕೆ ಮೋಕ್ಷಿತಾ ಏನಂತಾರೆ...? - Mokshita said she will not leave serial
ನನಗೆ ಸಿನಿಮಾದಲ್ಲಿ ಅವಕಾಶ ದೊರೆತಿದೆ ಎಂದ ಮಾತ್ರಕ್ಕೆ ಸೀರಿಯಲ್ ಬಿಡುವುದಿಲ್ಲ. ನಾನು ಎಷ್ಟು ಸಿನಿಮಾಗಳಲ್ಲಿ ನಟಿಸಿದರೂ ಧಾರಾವಾಹಿಗಳೇ ನನ್ನ ಮೊದಲ ಆದ್ಯತೆ ಎನ್ನುತ್ತಾರೆ ಮೋಕ್ಷಿತಾ ಪೈ. ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾದಲ್ಲಿ ಮೋಕ್ಷಿತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾದಲ್ಲಿ ತಮಗೆ ಅವಕಾಶ ದೊರೆತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮೋಕ್ಷಿತಾ, " ಪಾರು ಪಾತ್ರದ ಮೂಲಕ ಮೊದಲ ಬಾರಿಗೆ ನಾನು ಬಣ್ಣದ ಲೋಕಕ್ಕೆ ಕಾಲಿಟಿದ್ದೇನೆ. ಸಂತಸದ ವಿಚಾರ ಎಂದರೆ ಮೊದಲ ಧಾರಾವಾಹಿಯಲ್ಲೇ ಸೀರಿಯಲ್ ಪ್ರಿಯರು ನನ್ನನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಜನರು ತುಂಬಾ ಪ್ರೀತಿ ತೋರಿಸುತ್ತಿದ್ದಾರೆ. ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಹೊರಗಡೆ ಹೋದಾಗಲಂತೂ ಜನ ನನ್ನನ್ನು ಪಾರು ಆಗಿ ಗುರುತಿಸುತ್ತಾರೆ ಹೊರತು ಮೋಕ್ಷಿತಾ ಪೈ ಆಗಿ ಗುರುತಿಸುವುದಿಲ್ಲ. ಜನರ ಮೇಲೆ ಪಾರು ಪ್ರಭಾವ ಹೇಗೆ ಉಂಟಾಗಿದೆ ಎಂಬುದು ಇದರಿಂದ ತಿಳಿಯುತ್ತದೆ " ಎಂದು ಮೋಕ್ಷಿತಾ ಹೇಳುತ್ತಾರೆ.
"ಸಿನಿಮಾದಲ್ಲಿ ನಟಿಸುತ್ತಿರುವುದು ನಿಜ. ಹಾಗೆಂದ ಮಾತ್ರಕ್ಕೆ ಕಿರುತೆರೆ ಬಿಟ್ಟೆ ಎಂದರ್ಥವಲ್ಲ. ನನ್ನ ಮೊದಲ ಆದ್ಯತೆ ಎಂದಿಗೂ ಧಾರಾವಾಹಿಗಳೇ ಎನ್ನುತ್ತಾರೆ ಈ ನಟಿ. ಇದೇ ಮೊದಲ ಬಾರಿಗೆ ಹಿರಿತೆರೆಗೆ ಕಾಲಿಟ್ಟಿರುವ ಮೋಕ್ಷಿತಾ ಪೈ "ಈ ಸಿನಿಮಾ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಒಳಗೊಂಡಿದೆ. ಒಂದರ್ಥದಲ್ಲಿ ನೋಡಿದರೆ ಸಿನಿಮಾದ ನನ್ನ ಪಾತ್ರ ಪಾರು ಕಥೆಯನ್ನು ಹೋಲುವಂತಿದೆ. ಕಥೆ ಕೇಳಿದಾಗ ಇದು ನನ್ನ ಲಾಂಚ್ಗೆ ಸರಿಯಾದ ಅವಕಾಶ ಎಂದೆನಿಸಿತು. ಅದೇ ಕಾರಣದಿಂದ ಒಪ್ಪಿಕೊಂಡೆ. ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಆರಂಭದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ" ಎಂದು ಪಾರು ಹೇಳಿದ್ದಾರೆ.