ಕರ್ನಾಟಕ

karnataka

ETV Bharat / sitara

'ಎದೆ ತುಂಬಿ ಹಾಡುವೆನು' ಕಾರ್ಯಕ್ರಮಕ್ಕೆ ತೀರ್ಪುಗಾರ ನಾದಬ್ರಹ್ಮ ಹಂಸಲೇಖ: ವಾಹಿನಿ ಹೇಳಿದ್ದೇನು? - Dr. SP Bala Subrahmanyam death anniversary

ಜನಪ್ರಿಯ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮತ್ತೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮಕ್ಕೆ ನಾದಬ್ರಹ್ಮ ಹಂಸಲೇಖ ತೀರ್ಪುಗಾರರಾಗಿ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅದು ಸುಳ್ಳು ಸುದ್ದಿ ಎಂದು ವಾಹಿನಿ ಮೂಲಗಳು ಸ್ಪಷ್ಟಪಡಿಸಿವೆ.

veteran singer Hamsalekha
ನಾದಬ್ರಹ್ಮ ಹಂಸಲೇಖ

By

Published : Aug 4, 2021, 9:06 AM IST

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು ಕಾರ್ಯಕ್ರಮವು ಮತ್ತೊಮ್ಮೆ ಪ್ರಸಾರವಾಗುವುದಕ್ಕೆ ಸಜ್ಜಾಗುತ್ತಿದೆ. ಆಗಸ್ಟ್ 8ಕ್ಕೆ ಬಿಗ್‌ಬಾಸ್ ಮುಗಿಯಲಿದ್ದು, ಅದರ ಮುಂದುವರೆದ ಭಾಗವಾಗಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮವು ಆಗಸ್ಟ್ 15ರಿಂದ ಪ್ರಾರಂಭವಾಗಲಿದೆ. ಆ ನಂತರ ಪ್ರತೀ ಶನಿವಾರ ಮತ್ತು ಭಾನುವಾರಗಳಂದು ಕಾರ್ಯಕ್ರಮ ಪ್ರಸಾರವಾಗಲಿದೆ.

ಹಿಂದೊಮ್ಮೆ ದಿವಂಗತ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಇನ್ನು ಈ ಸೀಸನ್ ತೀರ್ಪುಗಾರರಾಗಿ ರಾಜೇಶ್ ಕೃಷ್ಣನ್, ವಿ. ಹರಿಕೃಷ್ಣ ಮತ್ತು ರಘು ದೀಕ್ಷಿತ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಈಗಾಗಲೇ ಎಲ್ಲೆಡೆ ಹರಿದಾಡಿದೆ. ಹಲವು ವರ್ಷಗಳ ಕಾಲ ಝೀ ಕನ್ನಡ ವಾಹಿನಿಯ ಜೊತೆಗೆ ಗುರುತಿಸಿಕೊಂಡಿದ್ದ ರಾಜೇಶ್ ಕೃಷ್ಣನ್, ಇದೇ ಮೊದಲ ಬಾರಿಗೆ ಕಲರ್ಸ್ ಕನ್ನಡದ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.

ಈ ಮಧ್ಯೆ, ರಾಜೇಶ್ ಕೃಷ್ಣನ್ ಜೊತೆಗೆ ಹಂಸಲೇಖ ಸಹ ತೀರ್ಪುಗಾರರಾಗಿರುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ, ಹಂಸಲೇಖ ಈ ಕಾರ್ಯಕ್ರಮದ ತೀರ್ಪುಗಾರರಲ್ಲ ಎಂದು ಕಲರ್ಸ್ ಮೂಲಗಳು ತಿಳಿಸಿದೆ. ಕಾರ್ಯಕ್ರಮದ ಪ್ರತೀ ಎಪಿಸೋಡ್​ನಲ್ಲೂ ಬೇರೆ ಬೇರೆ ತೀರ್ಪುಗಾರರು ಅತಿಥಿಯಾಗಿ ಬಂದು ಹೋಗುತ್ತಿರುತ್ತಾರಂತೆ. ಹಾಗೆ ಹಂಸಲೇಖ ಸಹ ಯಾವುದೋ ಒಂದು ವಾರ ಅತಿಥಿಯಾಗಿ ಬರುವ ಸಾಧ್ಯತೆ ಇರುವುದು ಬಿಟ್ಟರೆ, ಮಿಕ್ಕಂತೆ ಅವರು ಖಾಯಂ ತೀರ್ಪುಗಾರರಾಗಿರುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿದೆ.

ಈಗಾಗಲೇ ಕಾರ್ಯಕ್ರಮದ ಪ್ರೊಮೋಗಳು ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರಸಾರವಾಗುತ್ತಿವೆ. ಕಳೆದ ವಾರ ಸದ್ದಿಲ್ಲದೆ ರಾಜೇಶ್ ಕೃಷ್ಣನ್, ರಘು ದೀಕ್ಷಿತ್ ಮತ್ತು ಹರಿಕೃಷ್ಣ ಅವರ ಪ್ರೊಮೋ ಶೂಟ್ ಮುಕ್ತಾಯವಾಗಿದ್ದು, ಆ ಪ್ರೊಮೋಗಳು ಸಹ ಸದ್ಯದಲ್ಲೇ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಆಗಸ್ಟ್ 15ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.

ABOUT THE AUTHOR

...view details