ಬಿಗ್ಬಾಸ್ ಫಿನಾಲೆ ಮುಗಿದ ನಂತರ ವೈಷ್ಣವಿ ಗೌಡ ಅವರ ಹೆಸರು ಬದಲಾಗಲಿದೆ. ಅವರ ಹೆಸರು ಇನ್ಮುಂದೆ ರೇಷ್ಮಾ ವೈಷ್ಣವಿ ಎಂದಾಗಲಿದೆ.
ಹೌದು, ಈ ಬಗ್ಗೆ ಸ್ವತಃ ವೈಷ್ಣವಿ ಅವರ ತಾಯಿ ಭಾನು ರವಿಕುಮಾರ್ ಅವರೇ ಹೇಳಿದ್ದಾರೆ. ದೊಡ್ಮನೆೆಯಲ್ಲಿ ಈಡೇರದ ಒಂದು ಆಸೆಯನ್ನು ಕೇಳುವಂತೆ ಕೆಲ ದಿನಗಳ ಹಿಂದೆ ಬಿಗ್ಬಾಸ್ ಹೇಳಿದ್ದರು. ವೈಷ್ಣವಿ ತಮ್ಮ ಮನೆಯಿಂದ ವಾಯ್ಸ್ ನೋಟ್ ಕಳಿಸುವಂತೆ ಕೇಳಿಕೊಂಡಿದ್ದರು. ಅದರಂತೆ ವೈಷ್ಣವಿ ಅವರ ತಾಯಿಯ ವಾಯ್ಸ್ ನೋಟ್ ಬಂದಿದೆ. ಅದರ ಜೊತೆಗೆ ತಾಯಿ, ತಂದೆ, ಅಣ್ಣ ಹಾಗೂ ಅತ್ತಿಗೆಯೊಂದಿಗೆ ವೈಷ್ಣವಿ ಇರುವ ಫೋಟೋ ಇಡಲಾಗಿತ್ತು.
ಕುಟುಂಬದೊಂದಿಗೆ ವೈಷ್ಣವಿ ಗೌಡ ವಾಯ್ಸ್ ನೋಟ್ ಹೀಗಿತ್ತು:
ಹಾಯ್ ವೈಷು ಹೇಗಿದ್ದೀಯಾ? ಮನೆಯಲ್ಲಿ ನಾವೆಲ್ಲರೂ ಚೆನ್ನಾಗಿದ್ದೇವೆ. ನಮ್ಮ ಬಗ್ಗೆ ಏನೂ ಟೆನ್ಷನ್ ಮಾಡಿಕೊಳ್ಳಬೇಡ, ಆರಾಮಾಗಿರು. ನಿನ್ನ ಜೊತೆಯಲ್ಲಿರುವ ಬಿಗ್ಬಾಸ್ ಫ್ರೆಂಡ್ಸ್‌ಗೆ ನಾವು ವಿಶ್ ಮಾಡಿದ್ದೇವೆ ಅಂತ ಹೇಳು. ಮಂಜು ಜೊತೆ ನೀನು ಮಾಡುವ ಕಾಮಿಡಿ ಸೂಪರ್ ಆಗಿತ್ತು. ಇನ್ನೊಂದು ನಿನ್ನ ಬಗ್ಗೆ ಹೇಳಬೇಕೆಂದರೆ, ಪ್ರತಿಯೊಂದು ಟಾಸ್ಕ್ ಅಲ್ಲೂ ನೀನು ಆಡುತ್ತ ಇದ್ದ ರೀತಿ ಸೂಪರ್ ಆಗಿತ್ತು ಎಂದು ಮಗಳನ್ನು ಹೊಗಳಿದ್ದಾರೆ.
ಹರಸಿಕೊಂಡು ಹುಟ್ಟಿದ್ದು ವೈಷ್ಣವಿ:
ಮನೆಯಲ್ಲಿ ನಿನ್ನ ಬಗ್ಗೆಯೇ ಜಾಸ್ತಿ ಮಾತು. ನಿನಗೆ 9 ತಿಂಗಳು ಇರುವಾಗಲೇ ತುಂಬ ಚೆನ್ನಾಗಿ ಮಾತನಾಡೋಕೆ ಶುರು ಮಾಡಿದ್ದೆ. ನಮಗೆ ಮತ್ತೊಂದು ಮಗು ಆಗಲಿ, ಅದು ಹೆಣ್ಣು ಮಗುವೇ ಆಗಬೇಕು ಎಂದು ದೇವರಲ್ಲಿ ಹರಸಿಕೊಂಡಿದ್ದೆವು. ಆಗ ನೀನು ಹುಟ್ಟಿದ್ದು ಎಂದು ವೈಷ್ಣವಿ ಅವರ ತಾಯಿ ಹೇಳಿಕೊಂಡಿದ್ಧಾರೆ.
ರೇಷ್ಮಾ ವೈಷ್ಣವಿ:
ಅಲ್ಲದೆ, ಚಿಕ್ಕವಳಿದ್ದಾಗ ತುಂಬ ಕ್ಯೂಟ್, ಗುಂಡು ಗುಂಡಾಗಿ ಪಿಂಕ್ ಕಲರ್ ಇದ್ದೆ ನೀನು. ಆಗ ನಿನಗೆ ರೇಷ್ಮಾ ಎಂದು ಹೆಸರಿಡಬೇಕು ಎಂದುಕೊಂಡಿದ್ದೆ. ಆದರೆ, ದೇವರ ಹರಕೆಯಿಂದ ಹುಟ್ಟಿದ್ದರಿಂದ ದೇವರ ಹೆಸರೇ ಇಡಬೇಕು ಅಂತ ವೈಷ್ಣವಿ ಎಂದು ಹೆಸರಿಡಲಾಯಿತು. ಇದೀಗ ಹಲವು ವರ್ಷಗಳ ನಂತರ ಸುದೀಪ್ ಸರ್ ಮೂಲಕ ನನ್ನ ಆಸೆ ಈಗ ಈಡೇರಿದೆ. ಮುಂದೆ ನಿನ್ನ ಹೆಸರು 'ರೇಷ್ಮಾ ವೈಷ್ಣವಿ' ಅಂತಾನೇ ಎಂದು ವೈಷ್ಣವಿ ಅವರ ತಾಯಿ ಭಾನು ರವಿಕುಮಾರ್ ಹೇಳಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ವೈಷ್ಣವಿ ಏನಾದರೂ ಹೇಳಬೇಕೆಂದರೆ ಯಾರಿಗೂ ನೋವಾಗದಂತೆ ತಮಗೂ ಅದರಿಂದ ಯಾವುದೇ ನೋವಾಗದಂತೆ ಮಾತನಾಡುತ್ತಿದ್ದರು. ಅದಕ್ಕಾಗಿ ಸುದೀಪ್ ಅವರು ರೇಷ್ಮೆ ಸೀರೆಯಲ್ಲಿ ಸುತ್ತಿ ಹೊಡೆದಂತೆ ವೈಷ್ಣವಿ ಮಾತನಾಡುತ್ತಾರೆ ಎಂದು ಹೇಳುತ್ತಿದ್ದರು. ಜೊತೆಗೆ ವೀಕೆಂಡ್ ಶೋದಲ್ಲಿ ರೇಷ್ಮಾ, ರೇಷ್ಮಕ್ಕ ಅಂತಲೇ ವೈಷ್ಣವಿಯವರನ್ನು ಕರೆಯುತ್ತಿದ್ದರು.