ಕರ್ನಾಟಕ

karnataka

ETV Bharat / sitara

ದಯವಿಟ್ಟು ಅವರನ್ನು ದೂಷಿಸಬೇಡಿ...ಟಿ.ಎನ್. ಸೀತಾರಾಮ್​ ಹೀಗೆ ಹೇಳಿದ್ದು ಯಾರ ಬಗ್ಗೆ..? - Director TN Seetaram give clarity about his serial stopped

'ಮಗಳು ಜಾನಕಿ' ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿರುವುದಕ್ಕೆ ಕಲರ್ಸ್ ಸೂಪರ್ ವಾಹಿನಿ ಹಾಗೂ ಮುಖ್ಯಸ್ಥರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್​​ಬುಕ್​​ನಲ್ಲಿ ಸ್ಪಷ್ಟನೆ ನೀಡಿರುವ ಟಿ.ಎನ್. ಸೀತಾರಾಮ್​​​​​​​​​​​​​​ ವಾಹಿನಿಯವರನ್ನು ಯಾರೂ ದೂಷಿಸಬೇಡಿ ಎಂದು ಮನವಿ ಮಾಡಿದ್ಧಾರೆ.

TN Seetaram
ಟಿ.ಎನ್. ಸೀತಾರಾಮ್

By

Published : Jun 3, 2020, 4:21 PM IST

ವಿಭಿನ್ನ ಕಥಾ ಹಂದರವುಳ್ಳ ಧಾರಾವಾಹಿಗಳ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ನಿರ್ದೇಶಕ ಟಿ.ಎನ್​. ಸೀತಾರಾಮ್​​​​​​​​​​​​​​​​​​​​​​ ಬಹಳ ದಿನಗಳ ನಂತರ 'ಮಗಳು ಜಾನಕಿ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳಿ ಬಂದಿದ್ದರು. ಆದರೆ ಇದೀಗ ಅನಿವಾರ್ಯ ಕಾರಣಗಳಿಂದಾಗಿ ಆ ಧಾರಾವಾಹಿ ಕೂಡಾ ಮುಂದಿನ ವಾರ ಮುಕ್ತಾಯಗೊಳ್ಳುತ್ತಿದೆ.

'ಮಗಳು ಜಾನಕಿ' ಧಾರಾವಾಹಿಯ‌‌ನ್ನು ನಿಲ್ಲಿಸಬೇಡಿ ಎಂದು ಧಾರಾವಾಹಿ ಅಭಿಮಾನಿಗಳು ಸೀತಾರಾಮ್ ಅವರನ್ನು ಇಂದಿಗೂ ಕೇಳುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲದ್ದರಿಂದ ವೀಕ್ಷಕರ ಅಸಮಾಧಾನ ಹೋಗಲಾಡಿಸಲು ಟಿ. ಎನ್​​​​. ಸೀತಾರಾಮ್ ಉತ್ತರಿಸಿದ್ದಾರೆ. ಉತ್ತರದ ಕೊನೆಯಲ್ಲಿ ಹೊಸ ಧಾರಾವಾಹಿ ಮೂಲಕ ಮತ್ತೊಮ್ಮೆ ನಿಮ್ಮ ಮುಂದೆ ಮರಳಿ ಬರಲಿದ್ದೇನೆ ಎಂಬ ಮುನ್ಸೂಚನೆಯನ್ನು ಕೂಡಾ ಕೊಟ್ಟಿದ್ದಾರೆ. ಇದರ ಬಗ್ಗೆ ತಮ್ಮ ಫೇಸ್​​​​ಬುಕ್​​​​​ನಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ.

'ನಮಸ್ಕಾರ, 'ಮಗಳು ಜಾನಕಿ' ನಿಲ್ಲುತ್ತಿರುವುದಕ್ಕಾಗಿ ಅನೇಕರು ಬೇಸರಗೊಂಡಿದ್ದೀರಿ. ಇದರ ಬಗ್ಗೆ ನನಗೆ ಅಸಂಖ್ಯಾತ ಫೋನ್ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ವಾಹಿನಿ ಮತ್ತು ಮುಖ್ಯಸ್ಥರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವುದು ನನಗೆ ಅಪಾರ ನೋವು ತಂದಿದೆ. ಕೊರೊನಾದಿಂದಾಗಿ ಉಂಟಾದ ಆರ್ಥಿಕ ಕುಸಿತದಿಂದಾಗಿ ಕಲರ್ಸ್ ಸೂಪರ್​​​​​​​​​​​​​​​​​​​​​​ ವಾಹಿನಿ ಕೆಲವು ತಿಂಗಳ ಮಟ್ಟಿಗೆ ಸ್ಥಗಿತಗೊಳಿಸುತ್ತಿರುವುದರಿಂದ 'ಮಗಳು ಜಾನಕಿ' ಸೇರಿ ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎಲ್ಲಾ ಧಾರಾವಾಹಿಗಳು ಪ್ರಸಾರ ನಿಲ್ಲಿಸುತ್ತಿದೆ. ಇದು ಅನಿವಾರ್ಯವಾಗಿರುವುದರಿಂದ ಯಾರೂ ಏನೂ ಮಾಡಲು ಸಾಧ್ಯವಿಲ್ಲ.

ನಿರ್ದೇಶಕ ಟಿ.ಎನ್. ಸೀತಾರಾಮ್

ಈ 'ಮಗಳು ಜಾನಕಿ' ನಿಮಗೆ ಪ್ರಿಯವಾಗಲು ನನ್ನಷ್ಟೇ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡಕಲ್ ಅವರು ಕೂಡಾ ಕಾರಣ. ಧಾರಾವಾಹಿಯ ಕಥೆಯನ್ನು ಹಗಲು-ರಾತ್ರಿ ಎನ್ನದೆ ನನ್ನೊಂದಿಗೆ ಕುಳಿತು ಸಿದ್ಧಪಡಿಸಿದ್ದು ಅವರೇ. 'ಮಗಳು ಜಾನಕಿ' ಎಂಬ ಚಂದದ ಹೆಸರು ಕೊಟ್ಟದ್ದು ಕೂಡಾ ಅವರೇ. ಮೊದಲ 50 ಕಂತುಗಳ ಚಿತ್ರಕಥೆಯನ್ನು ಎಲ್ಲರಿಗೂ ಹೃದಯಕ್ಕೆ ಮುಟ್ಟುವಂತೆ ಬರೆದುಕೊಟ್ಟದ್ದು ಪರಮೇಶ್ವರ್ ಹಾಗೂ ತಂಡ. ನಂತರ ಎಲ್ಲಾ ಬಗೆಯ ನಿರೂಪಣಾ ಸ್ವಾತಂತ್ರ್ಯವನ್ನೂ ಕಥೆಯ ಬಗ್ಗೆ ಕೊಟ್ಟರು. ಇದಕ್ಕೂ ಮುನ್ನ ಧಾರಾವಾಹಿ ಕೇವಲ ಒಂದು ವರ್ಷ ಪ್ರಸಾರವಾಗಲು ಕರಾರು ಆಗಿತ್ತು. ಆದರೆ ಅದನ್ನು ಎರಡು ವರ್ಷಕ್ಕೆ ವಿಸ್ತರಿಸಿಕೊಟ್ಟವರು ಪರಮೇಶ್ವರ್​​​.

ನಿರ್ಮಾಣದ ಹಂತದಲ್ಲಿ ಅನೇಕ ಕಷ್ಟಗಳು ಎದುರಾದಾಗ ಅದನ್ನು ಪರಿಹರಿಸಿಕೊಟ್ಟವರು ಅವರೇ. ಪರಮೇಶ್ವರ್ ಗುಂಡಕಲ್​​​ ಅವರಿಗೆ ವೈಯಕ್ತಿಕವಾಗಿ ಮತ್ತು ನಮ್ಮ ತಂಡದ ಪರವಾಗಿ ನಾನು ಋಣಿಯಾಗಿದ್ದೇನೆ. ಈಗ 'ಮಗಳು ಜಾನಕಿ' ಅನಿವಾರ್ಯ ಕಾರಣಗಳಿಂದ ನಿಲ್ಲುತ್ತಿರುವುದಕ್ಕೆ ಅವರನ್ನು ವೈಯಕ್ತಿಕ ಹೊಣೆ ಮಾಡಿ ಕೆಲವರು ದೂಷಿಸುವುದು ಅಮಾನವೀಯ ಮತ್ತು ನನಗೆ ಅಪಾರ ನೋವು ಉಂಟು ಮಾಡಿದೆ. 20 ವರ್ಷಗಳಿಂದ ನನ್ನ ಎಲ್ಲಾ ಧಾರಾವಾಹಿಗಳನ್ನೂ ಪ್ರಸಾರ ಮಾಡಿದವರು ಇದೇ ವಾಹಿನಿಯವರು.

ಮುಂದೆಯೂ ಕೂಡಾ ಮತ್ತೊಂದು ಧಾರಾವಾಹಿ ಮಾಡಿ ಪ್ರೀತಿ ಬೇಡಲು ನಿಮ್ಮ ಮುಂದೆ ಬರುತ್ತೇನೆ. ಅದು ಜಾನಕಿಯಷ್ಟೇ, ಅಥವಾ ಅದಕ್ಕಿಂತ ನಿಮಗೆ ಇಷ್ಟವಾಗಬಹುದೆಂಬ ಭರವಸೆ ನನಗೆ ಇದೆ. ಯಾರನ್ನೂ ವೈಯಕ್ತಿಕವಾಗಿ ದೂಷಿಸಿ ಮನಸ್ಸುಗಳನ್ನು ಕಹಿ ಮಾಡುವುದು ದಯವಿಟ್ಟು ಬೇಡ. ಸಾಧ್ಯವಾಗಿದ್ದರೆ ಕಲರ್ಸ್ ಕನ್ನಡದಲ್ಲಿ ಅವರು ಧಾರಾವಾಹಿಯನ್ನು ಖಂಡಿತ ಪ್ರಸಾರ ಮಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಪ್ರಸಾರ ಮಾಡಲಾಗುತ್ತಿಲ್ಲ. ಅದನ್ನೆಲ್ಲಾ ಅವರು ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳೋಣ. ನಿಮ್ಮ ಪ್ರೀತಿಗೆ ಮತ್ತೊಮ್ಮೆ ನಾನು ಆಭಾರಿ. ನಿಮ್ಮ ಪ್ರೀತಿ ಹೀಗೇ ಇರಲಿ' ಎಂದು ಟಿ. ಎನ್. ಸೀತಾರಾಮ್ ಬರೆದುಕೊಂಡಿದ್ದಾರೆ.

For All Latest Updates

ABOUT THE AUTHOR

...view details