ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳ ಪೈಕಿ 'ಕನ್ನಡ ಕೋಗಿಲೆ' ಕೂಡಾ ಒಂದು. ಹಾಡುತ್ತಿದೆ ಕನ್ನಡ ಕೋಗಿಲೆ ಎಂದು ಕಿರುತೆರೆ ವೀಕ್ಷಕರ ಮನ ಸೆಳೆದ ಗಾನ ಕೋಗಿಲೆಗಳ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯ. ಯಶಸ್ವಿ ಎರಡು ಸೀಸನ್ಗಳನ್ನು ಮುಗಿಸಿದ ಕನ್ನಡ ಕೋಗಿಲೆಯ ಸೂಪರ್ ಸೀಸನ್ ಕೂಡಾ ಇದೀಗ ಆರಂಭವಾಗಿದೆ.
ಆರ್ಜೆ ಮಾತ್ರವಲ್ಲ ನಿರೂಪಕಿಯಾಗಿಯೂ ಸೈ ಎನಿಸಿಕೊಂಡ ಗುಳಿಕೆನ್ನೆ ಚೆಲುವೆ - ಬದ್ಮಾಶ್
ಆರ್ಜೆ ಆಗಿ ಗುರುತಿಸಿಕೊಂಡಿರುವ ಗುಳಿಕೆನ್ನೆಯ ಚೆಲುವೆ ಸಿರಿ ತಾನೊಬ್ಬ ಒಳ್ಳೆಯ ನಿರೂಪಕಿ ಎಂಬುದನ್ನು ಕೂಡಾ ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ಸದ್ಯಕ್ಕೆ ಕನ್ನಡ ಕೋಗಿಲೆ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಹೊತ್ತಿರುವ ಸಿರಿ ನಗುವಿಗೆ ಬಹಳಷ್ಟು ಮಂದಿ ಫಿದಾ ಆಗಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಕನ್ನಡ ಕೋಗಿಲೆ ಶೋ ಆರಂಭವಾಗುವ ಮೊದಲು ಒಂದು ಮುದ್ದಾದ ಕೋಗಿಲೆ ವೇದಿಕೆ ಮೇಲೆ ಬಂದು ತನ್ನ ಸುಶ್ರಾವ್ಯ ಧ್ವನಿಯ ಮೂಲಕ ನಿಮಗೆಲ್ಲಾ ಸ್ವಾಗತ ಕೋರುತ್ತದೆ. ಆ ಕೋಗಿಲೆ ಬೇರಾರೂ ಅಲ್ಲ, ಕಾರ್ಯಕ್ರಮದ ನಿರೂಪಕಿ ಸಿರಿ. ಅರಳು ಹುರಿದಂತೆ ಪಟಪಟನೆ ಮಾತನಾಡುವ ಆರ್ಜೆ ಸಿರಿ ರೆಡಿಯೋ ಜಾಕಿ ಕೂಡಾ ಹೌದು. ರೆಡಿಯೋ ಜಾಕಿಯಾಗಿ ಲಕ್ಷಾಂತರ ರೆಡಿಯೋ ಕೇಳುಗರ ಮನಗೆದ್ದ ಸಿರಿ ಇದೀಗ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಗುಳಿಕೆನ್ನೆಯ ಚೆಲುವೆ ಸಂಗೀತಗಾರ್ತಿ ಕೂಡಾ. ಗಾಯಕಿಯಾಗಿಯೂ ಮನಸೆಳೆದಿರುವ ಸಿರಿ ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ರೇಡಿಯೋ ಮಿರ್ಚಿ 98.3 FM ನಲ್ಲಿ ಆರ್ಜೆ ಆಗಿ ಗುರುತಿಸಿಕೊಂಡಿರುವ ಸಿರಿ ಮೈಸೂರಿನ 104.8FM ನಲ್ಲೂ ಆರ್ಜೆ ಆಗಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ರ ಮೂಲಕ ಕಿರುತೆರೆಗೆ ಪರಿಚಿತವಾಗಿರುವ ಚೆಂದುಳ್ಳಿ ಚೆಲುವೆ ಬೆಳ್ಳಿತೆರೆಯಲ್ಲಿ ಈ ಮೊದಲೇ ಕಾಣಿಸಿಕೊಂಡಾಗಿದೆ. 'ಬದ್ಮಾಶ್' 'ಹ್ಯಾಪಿ ನ್ಯೂ ಇಯರ್' ಚಿತ್ರಗಳ ಮೂಲಕ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಂಡಿರುವ ಸಿರಿ ಇತ್ತೀಚೆಗೆ ತೆರೆ ಕಂಡಿರುವ 'ಕವಲುದಾರಿ' ಸಿನಿಮಾದಲ್ಲಿ ಅನಂತ್ನಾಗ್ ಪತ್ನಿಯ ಪಾತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಸೂಪರ್ ಸೀಸನ್ ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮಧುರ ಕಂಠದ ಕೋಗಿಲೆ ನಗುವಿಗೆ ಮನಸೋಲದವರೇ ಇಲ್ಲ ಎನ್ನಬಹುದು.