ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೌನರಾಗ' ಧಾರಾವಾಹಿಯಲ್ಲಿ ಮೂಕಿ ರಾಗ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಚಿತ್ರಶ್ರೀ ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆಕೃತಿ' ಧಾರಾವಾಹಿಯಲ್ಲಿ ಭೈರವಿ ಆಗಿ ಕಾಣಿಸಿಕೊಂಡಿದ್ದಾರೆ. ತಾನೊಬ್ಬಳು ನಿರೂಪಕಿಯಾಗಬೇಕು ಎಂಬ ಕನಸು ಹೊಂದಿದ್ದ ಚಿತ್ರಶ್ರೀ ಇಂದು ನಟನಾ ಜಗತ್ತಿನಲ್ಲಿ ಮೋಡಿ ಮಾಡುತ್ತಿದ್ದಾರೆ. ಅವರಿಗೆ ಧಾರಾವಾಹಿಯಲ್ಲಿ ಅವಕಾಶ ದೊರೆತಿದ್ದು ಕೂಡಾ ಒಂದು ವಿಶೇಷ ಸನ್ನಿವೇಶದಲ್ಲಿ.
ಓದಿನ ಜೊತೆಗೆ ಆ್ಯಕ್ಟಿಂಗ್ ಕೂಡಾ ಬ್ಯಾಲೆನ್ಸ್ ಮಾಡುತ್ತಿರುವ 'ಆಕೃತಿ'ಯ ಭೈರವಿ - Mounam fame actress Chitrashree
'ಮೌನಂ' ಸಿನಿಮಾ ಚಿತ್ರೀಕರಣದ ವೇಳೆ ಚಿಕ್ಕ ಪಾತ್ರವೊಂದರಲ್ಲಿ ನಟಿಸಲು ಅವಕಾಶ ಪಡೆದ ಚಿತ್ರಶ್ರೀ ಆಕಸ್ಮಿಕವಾಗಿ ಬಣ್ಣದ ಲೋಕಕ್ಕೆ ಬಂದವರು. ಮೌನರಾಗ ಧಾರಾವಾಹಿಯಲ್ಲಿ ಮಾತು ಬಾರದ ಹುಡುಗಿಯಾಗಿ ನಟಿಸಿದ್ದ ಚಿತ್ರಶ್ರೀ ಈಗ 'ಆಕೃತಿ' ಧಾರಾವಾಹಿಯ ಭೈರವಿ ಆಗಿ ನಟಿಸುತ್ತಿದ್ದಾರೆ.
ಚಿತ್ರಶ್ರೀ ವಿದ್ಯಾಭ್ಯಾಸದ ವೇಳೆ ಆಕೆ ಕಾಲೇಜು ಬಳಿ 'ಮೌನಂ' ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಸಿನಿಮಾ ಶೂಟಿಂಗನ್ನು ಬಹಳ ಹತ್ತಿರದಿಂದ ನೋಡಬೇಕೆಂಬ ಆಸೆಯಿಂದ ಶೂಟಿಂಗ್ ಸೆಟ್ ಬಳಿ ಹೋದಾಗ ಆಕೆಯನ್ನು ನೋಡಿದ ನಿರ್ದೇಶಕರು ಚಿತ್ರಶ್ರೀಗೆ ನಟಿಸುವ ಅವಕಾಶ ನೀಡಿದರು. ಆ ಸಿನಿಮಾದ ಒಂದು ದೃಶ್ಯದಲ್ಲಿ ಚಿತ್ರಶ್ರೀ ಆಕಸ್ಮಿಕವಾಗಿ ಕಾಣಿಸಿಕೊಂಡರು. ಇದೊಂದೇ ಕಾರಣದಿಂದ ನಾನು ಆ್ಯಕ್ಟಿಂಗ್ನಲ್ಲೇ ಮತ್ತೆ ಮುಂದುವರೆಯಬೇಕು ಎಂದು ಚಿತ್ರಶ್ರೀ ನಿರ್ಧರಿಸಿದರು. ಆಡಿಷನ್ನಲ್ಲಿ ಭಾಗವಹಿಸಿ 'ಮೌನರಾಗ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಮೊದಲ ಧಾರಾವಾಹಿಯಲ್ಲಿ ಮೂಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ನಂತರ ಓದಿನ ಸಲುವಾಗಿ ನಟನೆಯಿಂದ ವಿರಾಮ ಪಡೆದುಕೊಂಡರು.
ವಿದ್ಯಾಭ್ಯಾಸ ಪೂರೈಸಿ ಟೀಚಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದ ಚಿತ್ರಶ್ರೀ ಕೆಲವು ದಿನಗಳ ನಂತರ ಮತ್ತೆ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರು. ಇದಕ್ಕೆ 'ಆಕೃತಿ' ಧಾರಾವಾಹಿಯೇ ಕಾರಣ. ಧಾರಾವಾಹಿ ಕಥೆ ಇಷ್ಟವಾದ ಕಾರಣ ಮತ್ತೆ ಚಿತ್ರಶ್ರೀ ಆ್ಯಕ್ಟಿಂಗ್ ಮಾಡಲಾರಂಭಿಸಿದರು. ಇದೀಗ ಓದು, ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಾರೆ ಚಿತ್ರಶ್ರೀ. ಯಾವುದೇ ತರಬೇತಿ ಇಲ್ಲದೆ ಬಣ್ಣದ ಲೋಕಕ್ಕೆ ಬಂದ ಚಿತ್ರಶ್ರೀ ನಟನೆಗೆ ಅವಕಾಶ ದೊರೆತ ನಂತರವಷ್ಟೇ ಎಲ್ಲವನ್ನೂ ಕಲಿತರು. ಪ್ರಯತ್ನದಿಂದ ಎಲ್ಲವೂ ಸಾಧ್ಯ ಎನ್ನುವ ಈ ಚೆಲುವೆ ಯಾವ ಪಾತ್ರ ನೀಡಿದರೂ ಮಾಡಲು ರೆಡಿ ಎನ್ನುತ್ತಾರೆ.