ಮಾತಿನ ಮೂಲಕ ಇತರರನ್ನು ಸೆಳೆಯುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ವೀಕ್ಷಕರ ಮನಸ್ಸಿಗೆ ಲಗ್ಗೆ ಇಟ್ಟಿರುವ ನಿರೂಪಕರ ಮಾತುಗಾರಿಕೆಗೆ ಮನಸೋಲದವರಿಲ್ಲ. ನಿರೂಪಣೆ ಮೂಲಕ ಕಿರುತೆರೆ ರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಈ ನಿರೂಪಕರು ಕೇವಲ ನಿರೂಪಣೆ ಮಾಡುವುದು ಮಾತ್ರವಲ್ಲ, ನಟನಾ ರಂಗದಲ್ಲಿಯೂ ಮಿಂಚಿದ್ದಾರೆ.
ಅನುಶ್ರೀ
ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮದ ಮೂಲಕ ನಿರೂಪಣೆ ಕ್ಷೇತ್ರಕ್ಕೆ ಬಂದ ಅನುಶ್ರೀ ನಂತರ ಚಿನ್ನದ ಬೇಟೆ, ಕುಣಿಯೋಣು ಬಾರಾ, ಸರಿಗಮಪ ಸೇರಿದಂತೆ ಅನೇಕ ಕಾರ್ಯಕ್ರಮಗಳ ನಿರೂಪಣೆ ಮಾಡಿ ವೀಕ್ಷಕರ ಮನ ಸೆಳೆದಿದ್ದಾರೆ. ನಿರೂಪಣೆ ಜೊತೆಗೆ ನಟನಾ ರಂಗದಲ್ಲಿಯೂ ಛಾಪು ಮೂಡಿಸಿರುವ ಕರಾವಳಿ ಕುವರಿ ಅನುಶ್ರೀ 'ಬೆಂಕಿಪಟ್ಣ' ಸಿನಿಮಾದಲ್ಲಿ ನಟಿಸಿದ್ದಾರೆ. ಮಾತ್ರವಲ್ಲ 'ರಿಂಗ್ ಮಾಸ್ಟರ್' ಮತ್ತು 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿಯೂ ಅನುಶ್ರೀ ಬಣ್ಣ ಹಚ್ಚಿದ್ದಾರೆ. ಜೊತೆಗೆ 'ಕೋರಿ ರೊಟ್ಟಿ' ಎಂಬ ತುಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಸೃಜನ್ ಲೋಕೇಶ್
ಮಜಾ ವಿತ್ ಸೃಜಾ, ಡ್ಯಾಡಿ ನಂ 1, ಕಾಸ್ಗೆ ಟಾಸ್, ಮಜಾ ಟಾಕೀಸ್ ಕಾರ್ಯಕ್ರಮದ ನಿರೂಪಕರಾಗಿ ಟಾಕಿಂಗ್ ಸ್ಟಾರ್ ಎನಿಸಿಕೊಂಡಿರುವ ಸೃಜನ್ ಲೋಕೇಶ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನೀಲಮೇಘಶ್ಯಾಮ, ಆನೆ ಪಟಾಕಿ, ಹ್ಯಾಪಿ ಜರ್ನಿ, ಸಪ್ನೋ ಕಿ ರಾಣಿ, ಎಲ್ಲಿದ್ದೆ ಇಲ್ಲಿ ತನಕ ಸಿನಿಮಾಗಳಲ್ಲಿ ಸೃಜನ್ ಲೋಕೇಶ್ ನಾಯಕರಾಗಿ ನಟಿಸಿದ್ದಾರೆ. ನಟನೆ ಜೊತೆಗೆ ನಾನೊಬ್ಬ ಒಳ್ಳೆ ನಿರೂಪಕ ಎಂಬುದನ್ನು ಸೃಜನ್ ನಿರೂಪಿಸಿದ್ದಾರೆ.