ಕಿರುತೆರೆ ಮೂಲಕ ಬಣ್ಣದ ಪಯಣ ಆರಂಭಿಸುವ ಬಹುತೇಕ ನಟ-ನಟಿಯರು ಅವಕಾಶ ದೊರೆಯುತ್ತಿದ್ದಂತೆ ಬೆಳ್ಳಿತೆರೆ, ಪರಭಾಷೆಗೆ ಹೋಗುವುದು ಸಹಜ. ಆದರೆ ಕೆಲವರು ಮಾತ್ರ ಒಂದೋ ಎರಡೊ ಸಿನಿಮಾಗಳಲ್ಲಿ ನಟಿಸಿ ನಮಗೆ ಕಿರುತೆರೆಯೇ ಸರಿ ಎಂದು ವಾಪಸ್ ಬಂದವರಿದ್ದಾರೆ.
ರಘುಗೌಡ
'ಮಿಸ್ಟರ್ ಅ್ಯಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯಲ್ಲಿ ರಂಗೇಗೌಡನಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಬಂದ ರಘುಗೌಡ ನಂತರ ಬಣ್ಣ ಹಚ್ಚಿದ್ದು 'ದೇವಯಾನಿ' ಧಾರಾವಾಹಿಗೆ. ದೇವಯಾನಿಯಲ್ಲಿ ನಾಯಕ ಶ್ರೀವತ್ಸನಾಗಿ ನಟಿಸಿದ ರಘು ಇದೀಗ ಸಾಕೇತ್ ರಾಜಗುರು ಆಗಿ ಬದಲಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಸಾಕೇತ್ ಆಗಿ ನಟಿಸುವ ಮೂಲಕ ಮನರಂಜನೆ ನೀಡುತ್ತಿದ್ದಾರೆ ರಘು ಗೌಡ.
ಜಗನ್ ಚಂದ್ರಶೇಖರ್
'ಜೋಶ್' ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಜಗನ್ ಗುರುತಿಸಿಕೊಂಡಿದ್ದು ಮಾತ್ರ ಕಿರುತೆರೆಯಲ್ಲಿ. 'ಪುನರ್ ವಿವಾಹ' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದಿರುವ ಜಗನ್, 'ಗಾಂಧಾರಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಇದೀಗ 'ಸೀತಾವಲ್ಲಭ' ಧಾರಾವಾಹಿಯ ಆರ್ಯವಲ್ಲಭನಾಗಿ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.
ವಿನಯ್ ಗೌಡ
'ಚಿಟ್ಟೆ ಹೆಜ್ಜೆ' ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಬಂದ ವಿನಯ್ ಗೌಡ ಸಿಐಡಿ ಕರ್ನಾಟಕ, ಅಂಬಾರಿ, ಅಮ್ಮ, ಹರಹರ ಮಹಾದೇವ, ಜೈ ಹನುಮಾನ್, ಉಘೇ ಉಘೇ ಮಾದೇಶ್ವರದಲ್ಲಿ ನಟಿಸಿದ್ದಾರೆ. ಇದೀಗ 'ನಂದಿನಿ' ಧಾರಾವಾಹಿಯಲ್ಲಿ ನಾಯಕ ವಿರಾಟ್ ಆಗಿ ವಿನಯ್ ಅಭಿನಯಿಸುತ್ತಿದ್ದಾರೆ.
ರಾಕೇಶ್ ಮಯ್ಯ
'ಪ್ರೀತಿ ಪ್ರೇಮ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ರಾಕೇಶ್ ಮಯ್ಯ, ಲವಲವಿಕೆ ಧಾರಾವಾಹಿಯಲ್ಲಿ ನಾಯಕನ ಅಣ್ಣನಾಗಿ ಕಾಣಿಸಿಕೊಂಡರು. ನಂತರ ನಿಹಾರಿಕಾ ಧಾರಾವಾಹಿಯಲ್ಲಿ ನಾಯಕನ ಗೆಳೆಯನಾಗಿ ನಟಿಸಿದ ರಾಕೇಶ್, ಅವಳು ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿದರು. 'ಮಗಳು ಜಾನಕಿ'ಯಲ್ಲಿ ನಿರಂಜನ್ ಆಗಿ ಮನೆ ಮಾತಾಗಿರುವ ರಾಕೇಶ್, ಸದ್ಯ 'ಸಂಘರ್ಷ' ಧಾರಾವಾಹಿಯಲ್ಲಿ ರಾಕೇಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಾಗರ್ ಬಿಳಿಗೌಡ
'ಕಿನ್ನರಿ' ಧಾರಾವಾಹಿಯಲ್ಲಿ ನಂದು ಆಗಿ ನಟಿಸಿ ಧಾರಾವಾಹಿ ಪ್ರಿಯರ ಮನಗೆದ್ದ ಸಾಗರ್ ಬಿಳಿಗೌಡ, ಇದೀಗ ಯುವರಾಜನಾಗಿ ಮೋಡಿ ಮಾಡುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸಾರೆ' ಧಾರಾವಾಹಿಯಲ್ಲಿ ನಾಯಕ ಯುವರಾಜನಾಗಿ ಸಾಗರ್ ಅಭಿನಯಿಸುತ್ತಿದ್ದಾರೆ.
ಶಿಶಿರ್ ಶಾಸ್ತ್ರಿ
'ಪುಟ್ಟಗೌರಿ ಮದುವೆ'ಯ ಶ್ಯಾಮ್ ಆಗಿ ನಟನಾ ಪಯಣ ಶುರು ಮಾಡಿದ ಶಿಶಿರ್ 'ಕುಲವಧು' ಧಾರಾವಾಹಿಯ ವೇದ್ ಆಗಿ ಮನೆ ಮಾತಾದರು. 'ಸೇವಂತಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪ್ರೇಮಲೋಕ' ಧಾರಾವಾಹಿಯಲ್ಲಿ ಸುಧೀರ್ ಆಗಿ ಶಿಶಿರ್ ನಟಿಸುತ್ತಿದ್ದಾರೆ. ಶಿಶಿರ್ 2-3 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರು ಗುರುತಿಸಿಕೊಂಡಿರುವುದು ಮಾತ್ರ ಕಿರುತೆರೆಯಲ್ಲಿ.
ಅನಿರುದ್ಧ್ ಬಾಲಾಜಿ
ಕಲರ್ಸ್ ಕನ್ನಡ ವಾಹಿನಿಯ 'ಮೂರುಗಂಟು' ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ವಿಕ್ರಮಾದಿತ್ಯನಾಗಿ ಮನೆ ಮಾತಾಗಿರುವ ಅನಿರುದ್ಧ್ ಬಾಲಾಜಿ ಕೂಡಾ ಕಿರುತೆರೆಯಲ್ಲಿ ಮಿಂಚುತ್ತಿರುವ ಪ್ರತಿಭೆ. 'ಸಾಗರ ಸಂಗಮ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಅನಿರುದ್ಧ್ ,ಮುಂದೆ ಎರಡು ಕನಸು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಮತ್ತೆ ಮೂರು ಗಂಟು ಧಾರಾವಾಹಿ ಮೂಲಕ ಮತ್ತೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.