ಚೆನ್ನೈ:ಪೊನ್ಕುಮಾರನ್ ನಿರ್ದೇಶನದ ಮತ್ತು ಜಾಗ್ವಾರ್ ಸ್ಟುಡಿಯೋಸ್ನ ಬಿ. ವಿನೋದ್ ಜೈನ್ ನಿರ್ಮಿಸಿರುವ ಜೀವಾ - ಮಿರ್ಚಿ ಶಿವ ಅಭಿನಯದ 'ಗೋಲ್ಮಾಲ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಮಾರಿಷಸ್ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ನಟ ಜೀವಾ ಅವರು '83' ಚಿತ್ರದಲ್ಲಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಪಾತ್ರಕ್ಕಾಗಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಸದ್ಯ 'ಗೋಲ್ಮಾಲ್' ತಂಡ ವು ಕ್ರಿಸ್ಮಸ್ ಹಾಗೂ ವರ್ಷದ ವಿರಾಮಕ್ಕಾಗಿ ಚೆನ್ನೈಗೆ ವಾಪಸ್ ಆಗಿದೆ. ಚೆನ್ನೈನಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ ನಂತರ ಜನವರಿಯಲ್ಲಿ ಮಂದಿನ ಚಿತ್ರೀಕರಣಕ್ಕಾಗಿ ಮತ್ತೆ ಮಾರಿಷಸ್ಗೆ ಪ್ರಯಾಣ ಬೆಳಸಲಿದೆ.
ನಿರ್ದೇಶಕ ಪೊನ್ಕುಮಾರನ್ ಮಾತನಾಡಿ, 'ನಾವು ಕಳೆದ ತಿಂಗಳು ಮಾರಿಷಸ್ನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದೇವೆ. ಸುಮಾರು 25 ದಿನಗಳ ಕಾಲ ಪ್ರಮುಖ ಭಾಗಗಳನ್ನು ಚಿತ್ರೀಕರಿಸಿದ್ದೇವೆ. ಎಲ್ಲ ದೃಶ್ಯಗಳು ತುಂಬಾ ಚೆನ್ನಾಗಿ ಬಂದಿವೆ ಮತ್ತು ಎಲ್ಲ ವರ್ಗದ ಪ್ರೇಕ್ಷಕರು ಆನಂದಿಸಬಹುದಾದ ಹಾಸ್ಯ ಚಲನಚಿತ್ರವನ್ನು ನಿರ್ಮಿಸುವುದಾಗಿ ನಾನು ಭರವಸೆ ನೀಡುತ್ತೇನೆ' ಎಂದಿದ್ದಾರೆ.
ಜೀವಾ ಮತ್ತು ಮಿರ್ಚಿ ಶಿವ ಅವರೊಂದಿಗೆ ಕೆಲಸ ಮಾಡುವ ಕುರಿತು ಮಾತನಾಡಿದ ನಿರ್ದೇಶಕ, 'ಇಬ್ಬರೂ ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದು, 'ಗೋಲ್ಮಾಲ್' ಚಿತ್ರದಲ್ಲಿ ಇದು ವ್ಯಕ್ತವಾಗಲಿದೆ. ಚಿತ್ರದಲ್ಲಿ ಪಾಯಲ್ ರಜಪೂತ್, ತಾನ್ಯಾ ಹೋಪ್, ಯೋಗಿ ಸೇರಿದಂತೆ ಪ್ರಮುಖರ ತಾರಾಗಣವಿದೆ. ಬಾಬು, ನರೇನ್, ಮನೋಬಾಲಾ, ಸುಬ್ಬು ಪಂಚು, ವೈಯಾಪುರಿ, ಯುಗಿ ಸೇತು, ಸಂಜನಾ ಸಿಂಗ್, ಸಾಧು ಗೋಕಿಲಾ, ವಿಪಿನ್ ಸಿದ್ಧಾರ್ಥ್, ರಮೇಶ್ ಖನ್ನಾ, ಕೆಎಸ್ಜಿ ವೆಂಕಟೇಶ್, ಮಾಳವಿಕಾ, ಜಾರ್ಜ್ ಮರಿಯನ್ ಮತ್ತು ಮಧು ಸ್ನೇಹಾ ಚಿತ್ರದಲ್ಲಿದ್ದಾರೆ.
ಕೆ.ಭಾಗ್ಯರಾಜ್ ಅವರ ಹಿಂದಿನ ಸಹಾಯಕ ಕೆ.ಎಸ್. ರವಿಕುಮಾರ್ ಹಾಗೂ ಪೊನ್ಕುಮಾರನ್ ಈ ಹಿಂದೆ ಸೂಪರ್ಸ್ಟಾರ್ ರಜನಿಕಾಂತ್ ಅವರ 'ಲಿಂಗ' ಚಿತ್ರಕ್ಕೆ ಚಿತ್ರಕಥೆ ಮಾಡಿದ್ದರು. ವಿಷ್ಣುವರ್ಧನ, ಯಜಮಾನ ಮತ್ತು ತಮಿಳು - ಕನ್ನಡ ದ್ವಿಭಾಷಾ ಚಾರುಲತಾ, ಗೋಲ್ಮಾಲ್ ಸೇರಿದಂತೆ ಕನ್ನಡದ ಯಶಸ್ವಿ ಚಿತ್ರಗಳನ್ನು ಪೊನ್ಕುಮಾರನ್ ನಿರ್ದೇಶಿಸಿದ್ದಾರೆ.
ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ಎಸ್. ಸರವಣನ್, ಸಂಗೀತ ಸಂಯೋಜಕ ಅರುಲ್ ದೇವ್, ಸಂಕಲನಕಾರ ಡಾನ್ ಬಾಸ್ಕೋ, ಕಲಾ ನಿರ್ದೇಶಕ ಶಿವ ಮತ್ತು ಗೀತರಚನೆಕಾರರಾದ ಮದನ್ ಕರ್ಕಿ ಮತ್ತು ವಿವೇಕ ಈ ಚಿತ್ರ ತಂಡದಲ್ಲಿದ್ದಾರೆ. 2022ರ ಮೊದಲಾರ್ಧದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ವರ್ಷದ ಕೊನೆಯ ದಿನ ಕತ್ರಿನಾ ಕೈಫ್ ವರ್ಕೌಟ್: Watch video