ಗಂಡ-ಹೆಂಡತಿ ಅಂದ ಮೇಲೆ ಅಲ್ಲಿ ಜಗಳ, ವಾಗ್ವಾದ, ಅಭಿಪ್ರಾಯ ಭೇದ ಎಲ್ಲವೂ ಇರುತ್ತದೆ. ಇವೆಲ್ಲಕ್ಕಿಂತ ಮಿಗಿಲಾಗಿ ಪ್ರೀತಿ, ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆ ಇರಲೇ ಬೇಕಾಗುತ್ತದೆ. ದಂಪತಿಗಳ ನಡುವಿನ ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವಂಥ 'ಸೂಪರ್ ದಂಪತಿ' ಶೋ ಕಲರ್ಸ್ ಸೂಪರ್ ಚಾನೆಲ್‍ನಲ್ಲಿ ಆರಂಭವಾಗುತ್ತಿದೆ.
ನಿಮ್ಮ ಊರಿಗೂ ಬರ್ತಿದೆ 'ಸೂಪರ್ ದಂಪತಿ' ಸವಾರಿ.. ಚಾನೆಲ್ನಲ್ಲೂ ಕಾರ್ಯಕ್ರಮ ಆರಂಭ - ರಿಯಾಲಿಟಿ ಶೋ
'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ ನಡೆಸಿಕೊಡುತ್ತಿರುವ 'ಸೂಪರ್ ದಂಪತಿ' ಕಾರ್ಯಕ್ರಮ ನಿನ್ನೆಯಿಂದ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬರುವ ಅವಶ್ಯಕತೆಯಿಲ್ಲ. ಬದಲಿಗೆ ಕಾರ್ಯಕ್ರಮದ ವೇದಿಕೆ ಸವಾರಿ ನಿಮ್ಮ ಊರಿಗೆ ಬರಲಿದೆ.
ನಿನ್ನೆಯಿಂದ ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಸೋಮವಾರದಿಂದ ಶನಿವಾರ ಸಂಜೆ 6-7 ವರೆಗೆ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಬಿಗ್‍ಬಾಸ್ ಖ್ಯಾತಿಯ ಮತ್ತು 'ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ನಿರೂಪಕ ಮುರಳಿ ನಡೆಸಿಕೊಡಲಿದ್ದಾರೆ. ಹೊಸದಾಗಿ ಮದುವೆಯಾಗಿರುವ ನವಜೋಡಿಗಳಿಂದ ಆರಂಭವಾಗಿ ಮದುವೆಯ ಸಿಲ್ವರ್ ಜ್ಯೂಬ್ಲಿ ಆಚರಿಸಿಕೊಂಡಿರುವವರು ಕೂಡಾ ಇದರಲ್ಲಿ ಭಾಗವಹಿಸಬಹುದು. ಸಾಮಾನ್ಯವಾಗಿ ಈ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಇಚ್ಛಿಸುವ ವ್ಯಕ್ತಿಗಳು ಬೆಂಗಳೂರಿಗೆ ಬರಬೇಕಾಗುತ್ತದೆ. ಆದರೆ 'ಸೂಪರ್ ದಂಪತಿ' ಸ್ಪರ್ಧಿಗಳಿಗೆ ಆ ಕಷ್ಟ ಇಲ್ಲ. ಏಕೆಂದರೆ ಈ ಶೋ ಜನರ ಮನೆಬಾಗಿಲಿಗೆ ಬರುತ್ತದೆ. ಇದಕ್ಕಾಗಿಯೇ ಲಾರಿಯೊಂದು ಕೂಡಾ ಸಿದ್ಧವಾಗಿದೆ. ಈ ಲಾರಿಯಲ್ಲಿ ವಿಶೇಷವಾದ ವೇದಿಕೆ ನಿರ್ಮಿಸಲಾಗಿದ್ದು, ಕರ್ನಾಟಕದ ನೂರಾರು ಊರುಗಳಿಗೆ ಪ್ರಯಾಣ ಬೆಳೆಸುತ್ತದೆ. ತಾಲೂಕು ಕೇಂದ್ರಗಳಿಗೆ ದೊಡ್ಡ ರಿಯಾಲಿಟಿ ಶೋ ಬರುತ್ತಿರುವುದು ಕರ್ನಾಟಕದಲ್ಲಿ ಇದೇ ಮೊದಲು.
ಪ್ರತಿ ಊರುಗಳಲ್ಲಿ ದಂಪತಿಗಳನ್ನು ಆಟವಾಡಿಸಿ, ಮಾತಾಡಿಸಿ, ನಕ್ಕು ನಲಿಸಿ ಅವರಿಗೆ ಬಹುಮಾನಗಳನ್ನೂ ನೀಡುವ ಶೋ ಇದು. ಈಗಾಗಲೇ ತುಮಕೂರು, ಶಿರಾ, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲೆಲ್ಲಾ ಹೆಚ್ಚಿನ ಸಂಖ್ಯೆಯ ದಂಪತಿಗಳು ಭಾಗವಹಿಸಿದ್ದರು. ಮುಂದಿನ ಹಂತವಾಗಿ ಜಗಳೂರು, ಹರಿಹರ, ದಾವಣಗೆರೆ, ರಾಣೆಬೆನ್ನೂರು, ಬ್ಯಾಡಗಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ಎಪಿಸೋಡ್‍ನಲ್ಲೂ ನಾಲ್ಕು ದಂಪತಿ ಮೂರು ಆಟಗಳನ್ನು ಆಡುತ್ತಾರೆ. ಪ್ರತಿ ಗೇಮ್‍ನ ಕೊನೆಗೂ ಒಬ್ಬ ದಂಪತಿ ಆಟದಿಂದ ಹೊರ ಹೋಗುತ್ತಾರೆ. ಕೊನೆಗೆ ಒಬ್ಬ ದಂಪತಿ 'ಸೂಪರ್ ದಂಪತಿ'ಯಾಗಿ ಹೊರ ಹೊಮ್ಮುತ್ತಾರೆ. ಗೆಲ್ಲುವ ದಂಪತಿ ಬಂಗಾರದ ಮಾಂಗಲ್ಯವನ್ನು ಬಹುಮಾನವಾಗಿ ಗೆಲ್ಲುತ್ತಾರೆ. ಕಾರ್ಯಕ್ರಮ ನಡೆಯುವ ಊರುಗಳಲ್ಲಿ ಒಂದು ವಾರದ ಮೊದಲೇ ಆಡಿಷನ್ ನಡೆಯುತ್ತದೆ. ಅದರಲ್ಲಿ ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. Voot ಮೂಲಕವೂ ದಂಪತಿ ಅರ್ಜಿ ಸಲ್ಲಿಸಬಹುದು.