ರಾಜ್ಯಾದ್ಯಂತ ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ಕೂಡ ಒಂದಾಗಿದೆ. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಹೊಸ ಛಾಪು ಮೂಡಿಸಿದ್ದು, ಇದೀಗ ಮತ್ತೆ ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.
ಭರ್ಜರಿ ಮನರಂಜನೆ ನೀಡಲು ಮತ್ತೆ ಬಂತು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' - ಶ್ರೀಸಾಮಾನ್ಯರ ನೃತ್ಯ ಪ್ರತಿಭೆ ಅನಾವರಣ
ಕನ್ನಡ ಕಿರುತೆರೆಯಲ್ಲಿ ವಿಭಿನ್ನ ರಿಯಾಲಿಟಿ ಶೋಗಳನ್ನು ಮಾಡಿ ಖ್ಯಾತಿ ಗಳಿಸಿಕೊಂಡಿರುವ ಜೀ ಕನ್ನಡ ಈ ವಾರದಿಂದ 'ಡಾನ್ಸ್ ಕರ್ನಾಟಕ ಡಾನ್ಸ್' ಕಾರ್ಯಕ್ರಮವನ್ನು ಮತ್ತೆ ನಿಮ್ಮ ಮನೆಗೆ ತರುತ್ತಿದೆ.
ಹೌದು, ಈ ಬಾರಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಶ್ರೀಸಾಮಾನ್ಯರ ನೃತ್ಯ ಪ್ರತಿಭೆ ಅನಾವರಣಗೊಳ್ಳಲಿದೆ. ಅದಕ್ಕಾಗಿ ಕರ್ನಾಟಕದಾದ್ಯಂತ ಸಂಚರಿಸಿ 25 ಸಾವಿರದಿಂದ 30 ಸಾವಿರಕ್ಕೂ ಹೆಚ್ಚು ಜನರನ್ನು ಆಡಿಷನ್ ಮಾಡಿ, ಅದರಲ್ಲಿ ಐವತ್ತು ಮಂದಿ ಶ್ರೇಷ್ಠ ನೃತ್ಯಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವರ ನಡುವೆ ನೃತ್ಯ ಪ್ರದರ್ಶನದ ಹಣಾಹಣಿ ನಡೆಯಲಿದ್ದು, ಮೆಗಾ ಆಡಿಷನ್ ಸಂಚಿಕೆಗಳು ನಾಳೆ ಹಾಗೂ ಭಾನುವಾರ (ಜ.10) ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ.
ಈ ಶೋ ನಲ್ಲಿ ನಟ ವಿಜಯ್ ರಾಘವೇಂದ್ರ, ನಟಿ ರಕ್ಷಿತಾ ಪ್ರೇಮ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತೀರ್ಪುಗಾರರಾಗಿರುತ್ತಾರೆ. ಜೊತೆಗೆ ಭಾರತೀಯ ಚಿತ್ರರಂಗದ ಪ್ರಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರು ಸಹ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗೆ ತೀರ್ಪುಗಾರರಾಗಿ ಎಂಟ್ರಿ ನೀಡಿದ್ದಾರೆ.