ನಟನಾ ರಂಗಕ್ಕೆ ಬಂದ ನಂತರ ಯಾವುದೇ ಪಾತ್ರವಿರಲಿ, ಜೀವ ತುಂಬುವುದು ಕಲಾವಿದರ ಕೆಲಸ. ಅದರಲ್ಲೂ ವೀಕ್ಷಕರ ಮನ ಸೆಳೆಯಲು ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಬೇಕು ಎನ್ನುವುದು ಕಲಾವಿದನ ಬಹು ದೊಡ್ಡ ಕನಸು.
ಇನ್ನು ಪೌರಾಣಿಕ ಪಾತ್ರಗಳನ್ನು ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ. ಇಷ್ಟಾದರೂ ಆ ಪಾತ್ರದಲ್ಲಿ ನಟಿಸಲು ಆಸೆ ಪಟ್ಟು ಯಶಸ್ವಿಯಾದ ಬಹಳಷ್ಟು ಕಿರುತೆರೆ ನಟ-ನಟಿಯರಿದ್ದಾರೆ.
ವಿನಯ್ ಗೌಡ
ಚಿಟ್ಟೆ ಹೆಜ್ಜೆ, ಸಿಐಡಿ ಕರ್ನಾಟಕ, ಅಂಬಾರಿ, ಅಮ್ಮ, ಶುಭವಿವಾಹ ಧಾರಾವಾಹಿಗಳಲ್ಲಿ ವಿನಯ್ ಗೌಡ ಬಣ್ಣ ಹಚ್ಚಿದ್ದರೂ ಜನ ಅವರನ್ನು ಮೆಚ್ಚಿಕೊಂಡದ್ದು ಮಹಾದೇವನಾಗಿ ನಟಿಸಿದ ನಂತರ. 'ಹರಹರ ಮಹಾದೇವ' ಧಾರಾವಾಹಿಯ ಮಹಾದೇವನಾಗಿ ಅಭಿನಯಿಸಿ ಪೌರಾಣಿಕ ಪಾತ್ರಕ್ಕೂ ಸೈ ಎನಿಸಿಕೊಂಡಿರುವ ವಿನಯ್ ಗೌಡ ನಿಜ ಜೀವನದಲ್ಲಿ ಕೂಡಾ ಶಿವಭಕ್ತ . 'ಜೈ ಹನುಮಾನ್' ಧಾರಾವಾಹಿಯಲ್ಲಿ ಕೂಡಾ ವಿನಯ್ ಗೌಡ ರಾವಣನಾಗಿ ಅಬ್ಬರಿಸಿದ್ದಾರೆ. ಇದಾದ ನಂತರ ಉಘೇ ಉಘೇ ಮಾದೇಶ್ವರ ಧಾರಾವಾಹಿಯಲ್ಲಿ ಶ್ರವಣನಾಗಿ ವಿನಯ್ ಮನೆ ಮಾತಾದರು.
ಪ್ರಿಯಾಂಕಾ ಚಿಂಚೋಳಿ
ಹರಹರ ಮಹಾದೇವ ಧಾರಾವಾಹಿಯ ಪಾರ್ವತಿ ಪಾತ್ರವನ್ನು ನಿರ್ವಹಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಗುಲ್ಬರ್ಗಾ ಚೆಲುವೆ ಪ್ರಿಯಾಂಕಾ ಚಿಂಚೋಳಿ, ಮೊದಲ ಧಾರಾವಾಹಿಯಲ್ಲೇ ಪೌರಾಣಿಕ ಪಾತ್ರಕ್ಕೆ ಜೀವ ತುಂಬಿದವರು. ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೈ ಹನುಮಾನ್' ಧಾರಾವಾಹಿಯಲ್ಲಿ ಹನುಮಂತನ ಅಮ್ಮ ಅಂಜನಾ ದೇವಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡರು.
ಸಂಗೀತಾ ಶೃಂಗೇರಿ
ಸದ್ಯ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ಶೃಂಗೇರಿ ಚೆಲುವೆ ಸಂಗೀತಾ ಅವರ ಬಣ್ಣದ ಬದುಕಿಗೆ ಮುನ್ನುಡಿ ಬರೆದದ್ದೇ ಸತಿ ಪಾತ್ರ. ಹರಹರ ಮಹಾದೇವ ಧಾರಾವಾಹಿಯ ಸತಿಯಾಗಿ ಬಣ್ಣದ ಜಗತ್ತಿಗೆ ಬಂದ ಸಂಗೀತಾ ಕೂಡಾ ಮೊದಲ ಧಾರಾವಾಹಿಯಲ್ಲೇ ವೀಕ್ಷಕರು ಮನ ಗೆದ್ದರು.