ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಸತ್ಯ'ದಲ್ಲಿ ನಾಯಕ ಕಾರ್ತಿಕ್ ಆಗಿ ಅಭಿನಯಿಸುತ್ತಿರುವ ಸಾಗರ್ ಬಿಳಿಗೌಡ ಫುಲ್ ಖುಷಿಯಾಗಿದ್ದಾರೆ. ಧಾರಾವಾಹಿಯಲ್ಲಿನ ತಮ್ಮ ಅಭಿನಯಕ್ಕೆ ಪ್ರೇಕ್ಷಕರು ಉತ್ತಮವಾಗಿ ಸ್ಪಂದಿಸಿರುವುದಕ್ಕೆ ಸಾಗರ್ ಬಿಳಿಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ತಮ್ಮ ಧಾರಾವಾಹಿಯ ತಾಂತ್ರಿಕ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿರುವ ಸಾಗರ್, ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಮ್ಮ ತಂಡದ ಕೆಲವೊಂದು ಸದಸ್ಯರನ್ನು ಪರಿಚಯಿಸಿರುವ ಸಾಗರ್ ಬಿಳಿಗೌಡ, ಕೃಷ್ಣ ಹಾಗೂ ಸ್ವಪ್ನ ಇಬ್ಬರೂ ನಮ್ಮ ಧಾರಾವಾಹಿಯ ಅಡಿಪಾಯ. ಕರ್ಣ, ಸತೀಶ್ ನಮ್ಮ ಧಾರಾವಾಹಿಯ ಕ್ಯಾಮರಾಮ್ಯಾನ್ಗಳು. ಅವಿನಾಶ್, ಸುದರ್ಶನ್, ಕಾರ್ತಿಕ್ ಸಹಾಯಕರು. ದಿನೇಶ್ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ. ನಾಗು, ಜಯಂತ್, ಚರಣ್ ಇವರಿಗೆ ಸಹಾಯಕರು. ಅಂಬರೀಶ್ ನಮ್ಮ ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಾರೆ. ಈ ತಂಡ ಇಲ್ಲದಿದ್ದರೆ ಸತ್ಯ ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಧಾರಾವಾಹಿ ಪ್ರೇಕ್ಷಕರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸತ್ಯ ಹಾಗೂ ಕಾರ್ತಿಕ್ ಇಬ್ಬರನ್ನೂ ಸ್ವೀಕರಿಸಿದ್ದಕ್ಕೆ ನಾನು ಚಿರಋಣಿ ಎಂದು ಧನ್ಯವಾದ ಅರ್ಪಿಸಿದ್ದಾರೆ.