ನಟಿ ಮಯೂರಿ ಕ್ಯಾತರಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದವರು ಮಯೂರಿಗೆ ಇಷ್ಟವಾದ ತಿಂಡಿಗಳನ್ನು ಮಾಡಿ ಬಡಿಸುತ್ತಿದ್ದಾರೆ. ಅವರ ಬಯಕೆ ಏನು ಎಂದು ತಿಳಿದು ಆದನ್ನು ನೆರವೇರಿಸಲು ಯತ್ನಿಸುತ್ತಿದ್ದಾರೆ. ಅದೇ ರೀತಿ ನಟ ಹಾಗೂ ನಿರೂಪಕ ಸಿಹಿಕಹಿ ಚಂದ್ರು ಕೂಡಾ ಮಯೂರಿಗೆ ಅವರ ಇಷ್ಟದ, ಬಾಯಲ್ಲಿ ನೀರೂರಿಸುವ ತಿಂಡಿ ಮಾಡಿ ಕೊಟ್ಟಿದ್ದಾರೆ.
ಸಿಹಿ ಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ನಟಿ ಮಯೂರಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಚಂದ್ರು ಮಯೂರಿಗೆ ರುಚಿಯಾದ ಅಡುಗೆ ಮಾಡಿಕೊಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಮಯೂರಿ ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಚಾರವನ್ನು ಫೋಟೋಗಳೊಂದಿಗೆ ಸಿಹಿಕಹಿ ಚಂದ್ರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ಮಯೂರಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ತಿಳಿದು ಖುಷಿಯಾಯಿತು. ನನ್ನ ಅಡುಗೆ ಸವಿಯಬೇಕೆಂಬ ಆಸೆಯನ್ನು ಹೇಳಿದರು. ಗರ್ಭಿಣಿ ಬಯಕೆ ತೀರಿಸಬೇಕು ಎಂದೆನ್ನಿಸಿ ಆಕೆಯನ್ನು ಶೋಗೆ ಸ್ವಾಗತಿಸಿದೆ. ರುಚಿಯಾದ ಸ್ವೀಟ್ವೊಂದನ್ನು ಮಾಡಿಕೊಡುವಂತೆ ಕೇಳಿದರು. ವಿಶೇಷ ಹಲ್ವಾ ತಯಾರಿಸಿಕೊಟ್ಟೆ. ಈ ಶೋನಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ದೇವರು ಆರೋಗ್ಯವಂತ ಮಗುವನ್ನು ಕರುಣಿಸಲಿ" ಎಂದು ಹಾರೈಸಿದ್ದಾರೆ.