ಸಿಹಿಕಹಿ ಎಂದರೆ ನೆನಪಾಗುವುದು ಅವರ ಕಾಮಿಡಿ ಧಾರಾವಾಹಿ ಹಾಗೂ ಅವರು ಮಾಡುವ ಅಡುಗೆ. ಸಿಹಿಕಹಿ ಚಂದ್ರು ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಬೊಂಬಾಟ್ ಭೋಜನ ಹೊಸತನದಿಂದ ಕೂಡಿತ್ತು. ಅವರ ನಿರೂಪಣೆ ಕೂಡಾ ಆಹಾರಪ್ರಿಯರ ಮನ ಸೆಳೆದಿತ್ತು.
ವೀಕ್ಷಕರಿಗೆ ಮತ್ತೆ ಬೊಂಬಾಟ್ ಭೋಜನ ಬಡಿಸಲು ಬರುತ್ತಿರುವ ಸಿಹಿಕಹಿ ಚಂದ್ರು - Bombat Bojana program
ಕೆಲವು ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಅಡುಗೆ ಕಾರ್ಯಕ್ರಮ ಬೊಂಬಾಟ ಭೋಜನ ಮತ್ತೆ ಪ್ರಸಾರವಾಗುತ್ತಿದೆ. ಕಾರ್ಯಕ್ರಮದ ಪ್ರೋಮೋ ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಕಾರ್ಯಕ್ರಮ ವೀಕ್ಷಿಸಲು ವೀಕ್ಷಕರು ಕೂಡಾ ಕಾಯುತ್ತಿದ್ದಾರೆ.
ಇದೀಗ ಮತ್ತೆ ಸಿಹಿಕಹಿ ಚಂದ್ರು ನಿಮಗೆ ಅಡುಗೆ ಹೇಳಿಕೊಡಲು ಬರುತ್ತಿದ್ದಾರೆ. ಬೊಂಬಾಟ್ ಭೋಜನದ ಹೊಸ ಸೀಸನ್ ಆರಂಭವಾಗುತ್ತಿದೆ. ಕಾರ್ಯಕ್ರಮದ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವೇ ದಿನಗಳಲ್ಲಿ ಸಿಹಿಕಹಿ ಚಂದ್ರು ಮತ್ತಷ್ಟು ಬಾಯಲ್ಲಿ ನೀರೂರುವ ಅಡುಗೆಗಳನ್ನು ನಿಮಗೆ ಹೇಳಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಅಡುಗೆ ಮಾತ್ರವಲ್ಲದೆ ಖ್ಯಾತ ಹೋಟೆಲ್ಗಳಿಗೂ ಚಂದ್ರು ವೀಕ್ಷಕರನ್ನು ಕರೆದೊಯ್ಯುತ್ತಿದ್ದರು. ಅಷ್ಟೇ ಅಲ್ಲ ತಾವು ಕಾರ್ಯಕ್ರಮದಲ್ಲಿ ಮಾಡಿದ ಅಡುಗೆಯನ್ನು ಚಂದ್ರು ಪುಸ್ತಕ ರೂಪದಲ್ಲಿ ಹೊರ ತಂದಿದ್ದರು.
ಬೋಂಬಾಟ್ ಭೋಜನ ಮತ್ತೆ ಪ್ರಸಾರವಾಗುತ್ತಿದೆ ಎಂದು ತಿಳಿದ ವೀಕ್ಷಕರು ಕಾರ್ಯಕ್ರಮವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಅಡುಗೆ, ಟಿಪ್ಸ್ ಜೊತೆಗೆ ನವಿರಾದ ಹಾಸ್ಯದ ಮೂಲಕವೂ ಚಂದ್ರು ವೀಕ್ಷಕರನ್ನು ಗೆದ್ದಿದ್ದರು. ಮತ್ತೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬೊಂಬಾಟ್ ಭೋಜನ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ.