ರಾಧಾ ರಮಣ ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಆಲಿಯಾಸ್ ರಾಧಾಳಾಗಿ ಅಭಿನಯಿಸಿದ್ದ ಶ್ವೇತಾ ಪ್ರಸಾದ್ ತಮ್ಮ ಮನೋಜ್ಞ ಅಭಿನಯದ ಮೂಲಕ ಕಿರುತೆರೆ ಪ್ರಿಯರ ಮನ ಸೆಳೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಶ್ವೇತಾ ಪ್ರಸಾದ್ ಕೇವಲ ನಟಿಯಾಗಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳ ಮೂಲಕವೂ ಗಮನ ಸೆಳೆದಿದ್ದಾರೆ.
ನಟನೆಯ ಜೊತೆಗೆ ಮತ್ತೊಂದು ಮಹತ್ತರವಾದ ಕಾರ್ಯಕ್ಕೆ ಶ್ವೇತಾ ಪ್ರಸಾದ್ ಕೈ ಹಾಕಿದ್ದಾರೆ. ಒಂದಷ್ಟು ದಿನಗಳ ಮೊದಲು ನ್ಯೂ ವೆಂಚರ್ ಕಮಿಂಗ್ ಸೂನ್ ಎಂದು ಹೇಳಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದ ಶ್ವೇತಾ, ಇದೀಗ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿರುವ ಶ್ವೇತಾ, "ಒಂದು ಬದಲಾವಣೆ ತರೋದಕ್ಕೆ ದೊಡ್ಡ ಚಳುವಳಿ ನಡೆಸಬೇಕಾಗಿಲ್ಲ, ಬದಲಿಗೆ ಒಂದು ಆಯ್ಕೆ ಅಥವಾ ನಿರ್ಧಾರ ಸಾಕು" ಎನ್ನುವ ಅವರ ಹೊಸ ಉದ್ಯಮಕ್ಕೆ ವಿತ್ ಲವ್ ಸ್ಟೋರ್ಸ್ ಎಂದು ಹೆಸರಿಡಲಾಗಿದೆ. ಇದು ನಿನ್ನೆ ಮೊನ್ನೆಯ ಆಲೋಚನೆ ಖಂಡಿತ ಅಲ್ಲ. ಬದಲಿಗೆ ಕಾಲೇಜು ದಿನಗಳಿಂದಲೇ ಈ ರೀತಿಯ ಆಲೋಚನೆ ನನ್ನ ಮನದಲ್ಲಿತ್ತು. ಇದೀಗ ಈ ಒಂದು ತಿಂಗಳಿನಲ್ಲಿ ಅದು ಪೂರ್ಣ ರೂಪ ಪಡೆಯಿತು. ಇದೇ ಆ. 21ರ ಗೌರಿ ಹಬ್ಬದ ದಿನದಂದು ವಿತ್ ಲವ್ ಸ್ಟೋರ್ಸ್ ಶುರುವಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಆರ್ಜೆ ಪ್ರದೀಪ ಅವರ ಪತ್ನಿಯಾಗಿರುವ ಶ್ವೇತಾ ಪ್ರಸಾದ್ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದರು. ಮುಂದೆ ರಾಧಾ ರಮಣ ಧಾರಾವಾಹಿಯ ಆರಾಧನಾ ಆಗಿ ನಟಿಸಿದ್ದ ಶ್ವೇತಾ, ಕಳ್ಬೆಟ್ಟದ ದರೋಡೆಕೋರರು ಸಿನಿಮಾದ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ.