ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 17 ಭಾರತೀಯ ಸೈನಿಕರು ಗಂಭೀರವಾಗಿ ಗಾಯಗೊಂಡು 20 ಯೋಧರು ವೀರ ಮರಣವನ್ನೊಂದಿದ ವಿಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಬೇಸರ ವ್ಯಕ್ತವಾಗಿತ್ತು. ದೇಶಕ್ಕಾಗಿ ತ್ಯಾಗ ಮಾಡಿರುವ ಸೈನಿಕರಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.
ದೇಶಕ್ಕಾಗಿ ಮಡಿದ ಭಾರತೀಯ ಯೋಧರಿಗೆ ನಮಿಸಿದ ಕೊಡಗಿನ ಕುವರಿ - Shweta Changappa about Indian soldiers
ಚೀನಾ ಸೈನಿಕರೊಂದಿಗೆ ಹೋರಾಡಿ ಮಡಿದ ಭಾರತೀಯ ಯೋಧರಿಗೆ ಕೊಡಗಿನ ಶ್ವೇತಾ ಚೆಂಗಪ್ಪ ನಮಿಸಿದ್ದಾರೆ. ನಿಮ್ಮೆಲ್ಲರ ತ್ಯಾಗಕ್ಕೆ ನಾವು ಚಿರಋಣಿ, ನೀವೇ ನಮ್ಮ ನಿಜವಾದ ಹೀರೋಗಳು ಎಂದು ಶ್ವೇತಾ ಸೈನಿಕರ ಸೇವೆಯನ್ನು ಸ್ಮರಿಸಿದ್ದಾರೆ.
ಇನ್ನು ಚೀನಾ ಸೈನಿಕರಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೈನಿಕರು ಕೂಡಾ ಚೀನಾದ 40 ಸೈನಿಕರನ್ನು ಸದೆಬಡಿದಿದ್ದಾರೆ. ದೇಶದ ಉಳಿವಿಗಾಗಿ ತಮ್ಮ ಅಮೂಲ್ಯ ಪ್ರಾಣವನ್ನು ಬಲಿದಾನ ಮಾಡಿದ ಭಾರತೀಯ ಯೋಧರ ಸೇವೆಯನ್ನು ಕಿರುತೆರೆ ನಟಿ, ಕೊಡಗಿನ ಕುವರಿ ಶ್ವೇತಾ ಚೆಂಗಪ್ಪ ಕೊಂಡಾಡಿದ್ದಾರೆ. ಮಾತ್ರವಲ್ಲ ನೀವೇ ನಿಜವಾದ ಹೀರೋಗಳು ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾರತೀಯ ಸೇನೆಯ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಶ್ವೇತಾ, ದೇಶ ಕಾಯುವ ಯೋಧರೇ, ನೀವು ನಮ್ಮೆಲ್ಲರ ನಿಜವಾದ ಹೀರೋಗಳು. ನಿಮ್ಮ ತ್ಯಾಗವನ್ನು ಬಣ್ಣಿಸಲು ಪದಗಳು ಸಿಗುವುದಿಲ್ಲ. ಪರದೆಯ ಮೇಲೆ ನಾವು ಕೇವಲ ಪಾತ್ರಧಾರಿಗಳು ಅಷ್ಟೇ. ಆದರೆ ನೀವೇ ನಿಜವಾದ ಹೀರೋಗಳು. ನಿಮ್ಮ ಪ್ರಾಣದ ಬಗ್ಗೆ ಯೋಚಿಸದೆ ನಮಗಾಗಿ ಹೋರಾಡಿದ್ದೀರಿ. ನಮಗಾಗಿ ಹೋರಾಡುತ್ತಿರುವ ಪ್ರತಿ ಭಾರತೀಯ ಸೈನಿಕನಿಗೂ ನನ್ನ ಕೋಟಿ ಕೋಟಿ ನಮನ. ನಿಮ್ಮ ಬಲಿದಾನಕ್ಕೆ ನಾನು ಚಿರಋಣಿ. ಯುದ್ಧದಲ್ಲಿ ಅಮರರಾಗಿರುವ ಎಲ್ಲಾ ಯೋಧರ ಕುಟುಂಬದವರಿಗೆ ಆ ಭಗವಂತ ಹೆಚ್ಚಿನ ಶಕ್ತಿಯನ್ನು ಕೊಡಲಿ ಎಂದು ಶ್ವೇತಾ ಬರೆದುಕೊಂಡಿದ್ದಾರೆ.