ಸ್ಟಾರ್ ಸುವರ್ಣ ವಾಹಿನಿ ಈಗಾಗಲೇ ಹಲವು ಹೊಸ ಕಾರ್ಯಕ್ರಮ ಹಾಗೂ ಧಾರಾವಾಹಿಯೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಿದೆ. ನಿನ್ನೆಯಿಂದ ಶ್ರುತಿ ನಾಯ್ಡು ನಿರ್ದೇಶನದ 'ಮನಸೆಲ್ಲಾ ನೀನೇ' ಎಂಬ ಹೊಸ ಧಾರಾವಾಹಿ ಆರಂಭವಾಗಿದೆ. ನಾಯಕಿಯಾಗಿ ರಶ್ಮಿ ಪ್ರಭಾಕರ್, ನಾಯಕನಾಗಿ ಸುಜಿತ್ , ಬಾಲ ಕಲಾವಿದ ಆಲಾಪ್ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಶ್ರುತಿ ನಾಯ್ಡು ನಿರ್ಮಾಣದ ಹೊಸ ಧಾರಾವಾಹಿ 'ಮನಸೆಲ್ಲಾ ನೀನೇ' ಪ್ರಸಾರ ಆರಂಭ - Shruti naidu new serial
ರಶ್ಮಿ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮನಸೆಲ್ಲಾ ನೀನೇ' ಧಾರಾವಾಹಿ ನಿನ್ನೆಯಿಂದ ಪ್ರಸಾರ ಆರಂಭಿಸಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಧಾರಾವಾಹಿ ಪ್ರತಿದಿನ ರಾತ್ರಿ 9.30 ಕ್ಕೆ ಪ್ರಸಾರವಾಗಲಿದೆ.
![ಶ್ರುತಿ ನಾಯ್ಡು ನಿರ್ಮಾಣದ ಹೊಸ ಧಾರಾವಾಹಿ 'ಮನಸೆಲ್ಲಾ ನೀನೇ' ಪ್ರಸಾರ ಆರಂಭ Mansella neene](https://etvbharatimages.akamaized.net/etvbharat/prod-images/768-512-9800820-thumbnail-3x2-manasellanene.jpg)
ಅಪ್ಪ ಅಮ್ಮನ ಪ್ರೀತಿಯ ಮಗಳು ರಾಗ, ವೃತ್ತಿಯಲ್ಲಿ ಡಯಟಿಷಿಯನ್. ಆಕೆಗೆ ಪುಟಾಣಿ ಪ್ರೀತು ಅಂದ್ರೆ ಪ್ರಾಣ, ಅವನಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದಾಳೆ. ಯಶಸ್ಸಿನ ಅಮಲಿನಲ್ಲಿ ತೇಲುವ ರಾಕ್ ಸ್ಟಾರ್ ಅರುಣ್ ಪಾತ್ರದಲ್ಲಿ ನಾಯಕನಾಗಿ ಸುಜಿತ್ ನಟಿಸುತ್ತಿದ್ದಾರೆ. ಅರುಣ್ ಅಂದ್ರೆ ಸೆನ್ಸೇಷನ್, ಅರುಣ್ ಅಂದ್ರೆ ಯೂತ್ ಐಕಾನ್. ರಾಗಾಳ ಮುದ್ದಿನ ಮಗ ಪ್ರೀತು ರಾಕ್ ಸ್ಟಾರ್ ಅರುಣ್ ದೊಡ್ಡ ಅಭಿಮಾನಿಯಾಗಿರುತ್ತಾನೆ. ಆದರೆ, ಪ್ರೀತು ಹುಟ್ಟಿನ ಹಿಂದೆ ಒಂದು ದೊಡ್ಡ ರಹಸ್ಯವಿದೆ. ಪುಟಾಣಿ ಆಲಾಪ್ ‘ಮನಸೆಲ್ಲಾ ನೀನೇ’ ಧಾರಾವಾಹಿಯ ಪ್ರೀತಮ್ ಆಗಿ ಪಾತ್ರ ನಿರ್ವಹಿಸಿದ್ದಾನೆ. ಈ ಮೂವರ ಅನುಬಂಧದ ಕಥೆಯೇ 'ಮನಸೆಲ್ಲಾ ನೀನೇ'.
ವಿಜಯ್ ಕಾಶಿ, ಅರುಣಾ ಬಾಲರಾಜ್ , ಬಾಬು ಹಿರಣಯ್ಯ , ಪ್ರಕಾಶ್ ಶೆಟ್ಟಿ, ರೇಖಾ ಸಾಗರ್ ಈ ಧಾರಾವಾಹಿಯ ತಾರಾಗಣದಲ್ಲಿದ್ದಾರೆ. ಕರ್ನಾಟಕದ ಸ್ಟೈಲಿಷ್ ಸಿಂಗರ್ ಸಂಜಿತ್ ಹೆಗ್ಡೆ ‘ಮನಸೆಲ್ಲಾ ನೀನೇ’ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡಿದ್ದು, ಈ ಹಾಡು ಈಗಾಗಲೇ ಜನಪ್ರಿಯವಾಗಿದೆ. "ಅದ್ಧೂರಿ ನಿರ್ಮಾಣ, ಸುಂದರ ಕಥೆ, ಮುದ್ದಾದ ಪಾತ್ರವರ್ಗದಿಂದ ‘ಮನಸೆಲ್ಲಾ ನೀನೇ’ ಧಾರಾವಾಹಿ ಕನ್ನಡ ಕಿರುತೆರೆ ವೀಕ್ಷಕರ ಮನಸ್ಸು ಗೆಲ್ಲುವುದರಲ್ಲಿ ಸಂಶಯವಿಲ್ಲ. ಇದು ಇತರ ಧಾರಾವಾಹಿಗಳಿಗಿಂತ ವಿಭಿನ್ನ ಕಥೆ ಹೊಂದಿದೆ. ಕಿರುತೆರೆ ವೀಕ್ಷಕರಿಗೆ ಹೊಸತೆನಿಸುವ ಕಥೆ ಮತ್ತು ಪಾತ್ರಗಳು ‘ಮನಸೆಲ್ಲಾ ನೀನೇ‘ ಧಾರಾವಾಹಿಯಲ್ಲಿದೆ" ಎಂಬುದು ವಾಹಿನಿಯ ಅಭಿಪ್ರಾಯ. ‘ಸಂಘರ್ಷ’ ಧಾರಾವಾಹಿ ನಂತರ ಶೃತಿ ನಾಯ್ಡು, ತಮ್ಮ ಚಿತ್ರಾಲಯ ಬ್ಯಾನರ್ ಮೂಲಕ ಸ್ಟಾರ್ ಸುವರ್ಣ ವಾಹಿನಿಯ ಎರಡನೇ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಪ್ರತಿ ದಿನ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.