ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ನಾಯಕನ ಅಮ್ಮ ಭಾನುಮತಿಯಾಗಿ ನಟಿಸುತ್ತಿರುವ ಚಿಕ್ಕಮಗಳೂರಿನ ಚೆಲುವೆ ಹೆಸರು ಶರ್ಮಿತಾ ಗೌಡ. 'ಜಾನಕಿ ರಾಘವ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಶರ್ಮಿತಾ ಗೌಡ ಮೊದಲ ಧಾರಾವಾಹಿಯಲ್ಲೇ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡರು.
ನೆಗೆಟಿವ್ ಪಾತ್ರಗಳ ಮೂಲಕವೇ ಹೆಸರು ಗಳಿಸಿರುವ ಚಿಕ್ಕಮಗಳೂರಿನ ಚೆಲುವೆ
'ಜಾನಕಿ ರಾಘವ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಶರ್ಮಿತಾ ಗೌಡ ಈಗ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲೂ ನೆಗೆಟಿವ್ ಪಾತ್ರಗಳಲ್ಲೇ ಹೆಚ್ಚು ಮಿಂಚುತ್ತಿದ್ದಾರೆ. ಚಿಕ್ಕಮಗಳೂರಿನ ಈ ಚೆಲುವೆ ಸಿನಿಮಾಗಳಲ್ಲಿ ಕೂಡಾ ಮಿಂಚಿದ್ದಾರೆ. ಜನರು ನಮ್ಮನ್ನು ನೆಗೆಟಿವ್ ಪಾತ್ರಗಳ ಮೂಲಕವೇ ಬೇಗ ಗುರುತಿಸುತ್ತಾರೆ ಎನ್ನುವ ಇವರಿಗೆ ಅಂತ ಪಾತ್ರಗಳೇ ಹೆಚ್ಚು ಸಿಗುತ್ತಿದೆ.
ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಪ್ರಿಯಾಂಕಾ ಪಾತ್ರದಲ್ಲಿ ಅಭಿನಯಿಸಿದ್ದ ಶರ್ಮಿತಾ, ಆ ಧಾರಾವಾಹಿಯಲ್ಲಿ ಕೂಡಾ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಇದೀಗ 'ಗೀತಾ' ಧಾರಾವಾಹಿಯಲ್ಲಿ ಕೂಡಾ ವಿಲನ್ ಭಾನುಮತಿ ಆಗಿ ವೀಕ್ಷಕರನ್ನು ಸೆಳೆದಿರುವ ಶರ್ಮಿತಾ ಬಯಸದೆ ಬಣ್ಣದ ಲೋಕಕ್ಕೆ ಬಂದ ಚೆಲುವೆ. ವೃತ್ತಿಯಲ್ಲಿ ನ್ಯೂಟ್ರಿಷಿಯನಿಸ್ಟ್ ಆಗಿದ್ದ ಶರ್ಮಿತಾ, ಇಂದು ಪೂರ್ಣ ಪ್ರಮಾಣದ ನಟಿಯಾಗಿ ಬಣ್ಣದ ಲೋಕದಲ್ಲಿ ಛಾಪು ಮೂಡಿಸುತ್ತಿದ್ದಾರೆ.ಬಯೋಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಮುಗಿಸಿದ ಬಳಿಕ ನ್ಯೂಟ್ರಿಷಿಯನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಶರ್ಮಿತಾ ಅವರ ಸೌಂದರ್ಯ, ಪ್ರತಿಭೆ ಕಂಡ ಸ್ನೇಹಿತರು, ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ಮಣಿದು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಶರ್ಮಿತಾ, ಮಿಸೆಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡರು. ನಂತರವಷ್ಟೇ ಕಿರುತೆರೆಗೆ ಕಾಲಿಟ್ಟರು. 'ಮನೆಯೇ ಮಂತ್ರಾಲಯ' ದಲ್ಲಿ ನಟಿಸಿದ ಶರ್ಮಿತಾಗೆ ಇಲ್ಲಿ ದೊರಕಿದ್ದು ಕೂಡಾ ವಿಲನ್ ಪಾತ್ರ . ಕಿರಿಸೊಸೆ ಪ್ರಿಯಾಂಕಾ ಪಾತ್ರ ಮಾಡಿದ ಅವರನ್ನು ಜನ ಇಂದಿಗೂ ಪ್ರಿಯಾಂಕಾ ಎಂದೇ ಗುರುತಿಸುತ್ತಾರೆ.
ತಮಿಳಿನ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ನೀಲ' ಧಾರಾವಾಹಿಯಲ್ಲಿ ಕೂಡಾ ನೆಗೆಟಿವ್ ರೋಲ್ನಲ್ಲಿ ನಟಿಸಿರುವ ಶರ್ಮಿತಾ, ಆ ಪಾತ್ರದ ನಟನೆಗೆ ಅತ್ಯುತ್ತಮ ಖಳನಟಿ ಪ್ರಶಸ್ತಿ ಪಡೆದಿದ್ದಾರೆ. ನಟನೆಯ ತರಬೇತಿ ಪಡೆಯದೇ ಈ ಕ್ಷೇತ್ರದಲ್ಲಿ ಮಿಂಚುತ್ತಿರುವ ಶರ್ಮಿತಾ ಅವರಿಗೆ ವಿನು ಬಳಂಜ ಆ್ಯಕ್ಟಿಂಗ್ ತರಬೇತಿ ನೀಡಿದ್ದಾರಂತೆ. ಹಿರಿಯ ನಟ ನಟಿಯರಿಂದಲೂ ಕಲಿತೆ ಎನ್ನುವ ಶರ್ಮಿತಾ ವೈವಿಧ್ಯಮಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಖಳನಟಿಯಾಗಿ ತಮ್ಮದೇ ಟ್ರೆಂಡ್ ಸೆಟ್ ಮಾಡಿರುವ ಶರ್ಮಿತಾ 'ಆಮ್ಲೆಟ್' ಹಾಗೂ 'ಸೀತಾಯಾನ' ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ನೆಗೆಟಿವ್ ಪಾತ್ರದಲ್ಲಿ ನಟನೆಗೆ ಅವಕಾಶ ಹೆಚ್ಚು. ನಟನೆಯ ಮೂಲಕವೇ ಅದು ಖಳನಾಯಕಿ ಪಾತ್ರ ಎಂದು ವೀಕ್ಷಕರಿಗೆ ತಿಳಿಯಬೇಕು ಎನ್ನುತ್ತಾರೆ ಚಿಕ್ಕಮಗಳೂರ ಈ ಚಿಕ್ಕ ಮಲ್ಲಿಗೆ.