ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಖಳನಾಯಕಿ ಸಾಹಿತ್ಯಳಾಗಿ ಅಭಿನಯಿಸಿ, ಪ್ರೇಕ್ಷಕರ ಮನ ಸೆಳೆದ ಶರಣ್ಯಾ ಶೆಟ್ಟಿ ಇದೀಗ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದರ ಹಿಂದೆ ಒಂದರಂತೆ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಈ ಚೆಲುವೆ, ಮೊದಲ ಬಾರಿ ನಟಿಸಿದ್ದು 'ರವಿ ಬೋಪಣ್ಣ' ಸಿನಿಮಾದಲ್ಲಿ. ರವಿ ಬೋಪಣ್ಣ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳಾಗಿ ಅಭಿನಯಿಸಿದ್ದ ಶರಣ್ಯಾ ಶೆಟ್ಟಿ ಇದೀಗ ಬಜಾರಿ ಪಾತ್ರದ ಮೂಲಕ ಮನರಂಜನೆ ನೀಡಲು ಬರುತ್ತಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಜೊತೆ '1980' ಸಿನಿಮಾದಲ್ಲಿ ಶರಣ್ಯಾ ಶೆಟ್ಟಿ ನಟಿಸಿದ್ದು, ಇದೀಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ನಾನು ತುಂಬಾ ವಿಭಿನ್ನ ರೀತಿಯ ಪಾತ್ರ ಮಾಡಿದ್ದೇನೆ. ತುಂಟತನದಿಂದ ಕೂಡಿದ ಹುಡುಗಿಯಾಗಿ ನಟಿಸುತ್ತಿದ್ದೇನೆ. ಇಲ್ಲಿಯ ತನಕ ನಾನು ಗಂಭೀರವಾಗಿರುವಂತಹ ಪಾತ್ರಗಳಲ್ಲಿ ನಟಿಸಿದ್ದೇ ಹೆಚ್ಚು, ಈ ಹಿಂದೆ ಇಂತಹ ಪಾತ್ರ ಮಾಡದ ಕಾರಣ ಅವಕಾಶ ಬಂದ ಕೂಡಲೇ ಒಪ್ಪಿಕೊಂಡೆ ಎಂದು ಶರಣ್ಯಾ ಶೆಟ್ಟಿ ತಿಳಿಸಿದ್ದಾರೆ.
ಇನ್ನು ಸ್ಪೂಕಿ ಕಾಲೇಜು, 31 ಡೇಸ್, 14th feb ಸಿನಿಮಾಗಳಲ್ಲಿ ಕೂಡ ಶರಣ್ಯಾ ಅಭಿನಯಿಸುತ್ತಿದ್ದಾರೆ. ಜೊತೆಗೆ ತಮಿಳು, ತೆಲುಗು ಭಾಷೆಯ ಸಿನಿಮಾದಲ್ಲಿಯೂ ನಟಿಸುವ ಅವಕಾಶ ಆಕೆಗೆ ಒಲಿದು ಬರುತ್ತಿದೆ.