ನಿತ್ಯ ಧಾರಾವಾಹಿ ನೋಡುವವರಿಗೆ ಇವರು ಹೊಸಬರೇನಲ್ಲ. ತನ್ನ ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಸೆಳೆದಿರುವ ಈ ಚೆಲುವೆಯ ಹೆಸರು ಸ್ವಪ್ನಾ ರಾಜ್. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ನಾಯಕ ರಿಷಿಯ ಅಮ್ಮ ತಾರಾ ಪಾತ್ರಧಾರಿಯಾಗಿ ಅಭಿನಯಿಸುತ್ತಿರುವ ಸ್ವಪ್ನಾ ಮೂಲ ಹೆಸರು ನಳಿನಿ
ನಳಿನಿ ಎಂಬ ಸುಂದರಿ ಸ್ವಪ್ನಾ ಆದ ಕಥೆ ನಿಜಕ್ಕೂ ರೋಚಕವಾಗಿದೆ. ಏಕ್ ದುಜೇ ಕೇಲಿಯೇ ಚಿತ್ರದಿಂದ ಪ್ರಭಾವಿತರಾಗಿದ್ದ ಸ್ವಪ್ನಾತಂದೆ ತಾಯಿ ತಮ್ಮ ಮುದ್ದಿನ ಮಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಿದರು. ಆರಂಭದಲ್ಲಿ ನಳಿನಿಯಾಗಿದ್ದ ಮುದ್ದು ಮುಖದ ಚೆಲುವೆ ನಂತರ ಸ್ವಪ್ನಾಆಗಿ ಬದಲಾದರು.
ಕಾಲೇಜಿನ ದಿನಗಳಲ್ಲಿ ಅಂತ್ಯಾಕ್ಷರಿ ಕಾರ್ಯಕ್ರಮ ನೀಡಿದ ಸ್ವಪ್ನಾರನ್ನು ಕಂಡ ಕ್ಯಾಮೆರಾಮನ್ ಒಬ್ಬರು ಕೇಬಲ್ ನೆಟ್ವರ್ಕ್ನಲ್ಲಿ ಕಾರ್ಯಕ್ರಮ ನೀಡುವಂತೆ ಕೇಳಿದರು. ಅದಾಗಿಯೇ ಬಂದ ಅವಕಾಶವನ್ನು ಒಲ್ಲೆ ಎನ್ನದ ಸ್ವಪ್ನಾಸರಿ ಎಂದು ಒಪ್ಪಿಯೇ ಬಿಟ್ಟರು. ಮುಂದೆ ನಿರೂಪಕಿಯಾಗಿ ಪರಿಚಯವಾಗಿಯೂ ಬಿಟ್ಟರು.
ಉದಯ ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವುದರ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆ ಪ್ರಾಯಶ್ಚಿತ ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದರು. ಮುಂದೆ ಪಾ.ಪ ಪಾಂಡು, ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳ, ಪಾಂಡುರಂಗ ವಿಠಲ, ದಂಡ ಪಿಂಡಗಳು, ದರಿದ್ರ ಲಕ್ಷ್ಮಿಯರು, ಜನನಿ, ಶಕ್ತಿ, ಚಂದ್ರಿಕಾ, ಮಾಂಗಲ್ಯ, ಪುರುಷೋತ್ತಮ, ಪದ್ಮಾವತಿ ಹೀಗೆ ಎಪ್ಪತ್ತೈದಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಪರಿಚಿತರಾದರು.