ಕಲೆ ಎನ್ನುವುದು ಎಲ್ಲರಿಗೂ ಒಲಿಯಲಾರದು ಎಂಬುದು ಅನುಭವಸ್ಥರ ಮಾತು. ಕಲಾವಿದರಾಗಿ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹಲವು ಮಂದಿ ಬಯಸುತ್ತಾರೆ ನಿಜ. ಆದರೆ ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಆಕಸ್ಮಾತ್ತಾಗಿ ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ ಮಾತ್ರವಷ್ಟೇ ಆರಾಮವಾಗಿ ಬಣ್ಣದ ಲೋಕದಲ್ಲಿ ಗುರತಿಸಿಕೊಳ್ಳಲು ಸಾಧ್ಯ. ಅದಕ್ಕೆ ಪ್ರಸಕ್ತ ಉದಾಹರಣೆ ಚಂದನಾ ಸುಬ್ರಹ್ಮಣ್ಯ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೂರುಗಂಟು ಧಾರಾವಾಹಿಯಲ್ಲಿ ನಾಯಕ ವಿಕ್ರಮಾದಿತ್ಯನ ಅಕ್ಕ ಮಯೂರಿ ಪಾತ್ರಕ್ಕೆ ಜೀವ ತುಂಬುತ್ತಿರುವ ಚಂದನಾ ಸುಬ್ರಹ್ಮಣ್ಯ ಬಯಸದೇ ಈ ಕ್ಷೇತ್ರಕ್ಕೆ ಬಂದವರು. ಫೇಸ್ ಬುಕ್ ನಲ್ಲಿ ಕೊಂಚ ಆ್ಯಕ್ಟೀವ್ ಆಗಿದ್ದ ಚಂದನಾಗೆ ಸ್ನೇಹಿತರೆಲ್ಲಾ ನೀನ್ಯಾಕೆ ನಟಿಸಬಾರದು ಎಂದು ಆಗಾಗ ಕೇಳುತ್ತಿದ್ದರು. ಜೊತೆಗೆ ಪಕ್ಕಾ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿರುವ ಚಂದನಾರ ಕುಟುಂಬದಲ್ಲಿ ಯಾರೂ ಕಲಾವಿದರಾಗಿರಲಿಲ್ಲ. ಆದ ಕಾರಣ ನಟಿಸೋದ ಬೇಡ್ವಾ ಎಂಬ ಗೊಂದಲದಲ್ಲಿ ಆಕೆಯಿದ್ದರು.
ಕೊನೆಗೆ ಫ್ಯಾಮಿಲಿ ಫ್ರೆಂಡ್ ಸಲಹೆಗೆ ಮಣಿದು ಆಡಿಷನ್ ಅಟೆಂಡ್ ಮಾಡ ತೊಡಗಿದರು ಚಂದನಾ. ಡಿಗ್ರಿಗೆ ಬಂದಾಗ ಟೆಲಿಫಿಲ್ಮ್ ನಲ್ಲಿ ನಟಿಸುವ ಅವಕಾಶ ದೊರಕಿತು. ಸೃಜನ್ ರಾಘವೇಂದ್ರ ಅವರ ತ್ರೀ ರೋಸಸ್ ಟೆಲಿಫಿಲ್ಮಿಗೆ ಆಯ್ಕೆ ಆದ ಚಂದನಾ ಅದರಲ್ಲಿ ಮುಖ್ಯಪಾತ್ರ ನಿರ್ವಹಿಸಿದರು. ಆಕ್ಟಿಂಗ್ ಬ್ಯಾಕ್ ಗ್ರೌಂಡ್ ಇರದ ಚಂದನಾಗೆ ಮೊದಲ ಬಾರಿ ಬಣ್ಣ ಹಚ್ಚಿದಾಗ ಆ್ಯಕ್ಟಿಂಗ್ ಎಂದರೇನು, ಹೇಗಿರುತ್ತದೆ ಎಂಬುದೇ ತಿಳಿದಿರಲಿಲ್ಲ. ಮೊದಲ ಬಾರಿಯ ಪ್ರಯತ್ನದಲ್ಲಿಯೇ ಯಶಸ್ವಿಯಾದ ಈಕೆ ಮುಂದೆ ಮುಖ ಮಾಡಿದ್ದು ಕಿರುತೆರೆಯತ್ತ.