ರಾಧಾ ಕಲ್ಯಾಣದ ವಿಶು ಆಗಿ ಕಿರುತೆರೆಗೆ ಬಂದ ಚಂದನ್ ಕುಮಾರ್, ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದನ್ ಆಗಿ ನಟಿಸಿ ಕಿರುತೆರೆ ಪ್ರಿಯರ ಮನ ಸೆಳೆದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಮಹಾಶಂಕರನಾಗಿ ಅಭಿನಯಿಸುತ್ತಿರುವ ಚಂದನ್ ಕುಮಾರ್ ತೆಲುಗು ಕಿರುತೆರೆಗೂ ಪರಿಚಿತ.
ತೆಲುಗಿನ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚುವ ಮೂಲಕ ಅಲ್ಲಿಯೂ ತಮ್ಮ ಛಾಪು ಮೂಡಿಸಿರುವ ಚಂದನ್ ಕುಮಾರ್ ಮತ್ತೊಂದು ಹೊಸ ಧಾರಾವಾಹಿ ಮೂಲಕ ವೀಕ್ಷಕರನ್ನು ಸೆಳೆಯಲು ಬರುತ್ತಿದ್ದಾರೆ. ಈ ಸಮಯದಲ್ಲಿ ಹೊಸ ಧಾರಾವಾಹಿಯಾ ಎಂದು ಆಶ್ಚರ್ಯ ಪಡಬೇಡಿ. ಇದು ಡಬ್ಬಿಂಗ್ ಧಾರಾವಾಹಿ. 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿ ಇದೀಗ ಕನ್ನಡಕ್ಕೆ ಡಬ್ ಆಗುತ್ತಿದ್ದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಕನ್ನಡದಲ್ಲಿ ಈ ಧಾರಾವಾಹಿ 'ಸನ್ ಆಫ್ ಸಾವಿತ್ರಮ್ಮ' ಹೆಸರಿನಲ್ಲಿ ಪ್ರಸಾರ ಕಾಣಲಿದೆ. ಆದರೆ ಎಂದಿನಿಂದ ಹಾಗೂ ಯಾವ ಸಮಯದಲ್ಲಿ ಧಾರಾವಾಹಿ ಪ್ರಸಾರವಾಗುತ್ತಿದೆ ಎಂಬ ವಿಚಾರವನ್ನು ವಾಹಿನಿ ಇನ್ನೂ ತಿಳಿಸಿಲ್ಲ. ಧಾರಾವಾಹಿಯಲ್ಲಿ ಬಾಲರಾಜು ಪಾತ್ರಕ್ಕೆ ಚಂದನ್ ಜೀವ ತುಂಬಿದ್ದಾರೆ. ಕುಸ್ತಿಪಟುವಾಗಿರುವ ಬಾಲರಾಜ್, ಕುಸ್ತಿ ಮತ್ತು ಕಟ್ಟುಮಸ್ತಾದ ಮೈಕಟ್ಟಿನಿಂದಾಗಿ ಹುಡುಗಿಯರ ಮನ ಸೆಳೆಯುತ್ತಾನೆ.
ಹೆಣ್ಣು ಮಕ್ಕಳ ಮನ ಕದ್ದಿರುವ ಬಾಲರಾಜು ಮದುವೆ ಆಗುವಂತಿಲ್ಲ. ಏಕೆಂದರೆ ಜೀವನ ಪೂರ್ತಿ ಬ್ರಹ್ಮಚಾರಿ ಆಗಿ ಇರುತ್ತೇನೆ ಎಂದು ಬಾಲರಾಜು ಅಮ್ಮನಿಗೆ ಮಾತು ಕೊಟ್ಟಿರುತ್ತಾನೆ. ಅಂತವನ ಬದುಕಿನಲ್ಲಿ ಯಾವ ರೀತಿಯ ತಿರುವುಗಳು ಎದುರಾಗುತ್ತದೆ ಎಂಬುದೇ 'ಸನ್ ಆಫ್ ಸಾವಿತ್ರಮ್ಮ' ಧಾರಾವಾಹಿ ಕಥಾ ಹಂದರ. ಈ ಧಾರಾವಾಹಿಯ ಪ್ರೋಮೋ ಈಗಾಗಲೇ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದು ವೀಕ್ಷಕರು ಧಾರಾವಾಹಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.