ವೀಕ್ಷಕರನ್ನು ಸೆಳೆಯಲು ವಾಹಿನಿಗಳು ಅವರ ಅಭಿರುಚಿಗೆ ತಕ್ಕಂತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಲ್ಲಿ ಕಸರತ್ತು ಮಾಡುತ್ತಿವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ 'ಸರಸು' ಹೊಸ ಧಾರಾವಾಹಿ ಪ್ರಸಾರವಾಗುತ್ತಿದ್ದು ಕಿರುತೆರೆಪ್ರಿಯರು ಕೂಡಾ ತಮ್ಮ ಮೆಚ್ಚಿನ ಧಾರಾವಾಹಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಇಂದಿನಿಂದ ಕನಸಿನ ಮೂಟೆ ಹೊತ್ತು ಬರುತ್ತಿದ್ದಾಳೆ 'ಸರಸು' - Skanda Ashok starring new serial
ಸುಪ್ರಿತಾ ಸತ್ಯಾನಾರಾಯಣ್ ಹಾಗೂ ಸ್ಕಂದ ಅಶೋಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಸರಸು' ಧಾರಾವಾಹಿ ಇಂದಿನಿಂದ ಪ್ರಸಾರ ಆರಂಭಿಸಲಿದೆ. ಮೈಸೂರು ಮಂಜು ಈ ಧಾರಾವಾಹಿಯನ್ನು ನಿರ್ದೇಶಿಸಿದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದು ರಾತ್ರಿ 9ಕ್ಕೆ 'ಸರಸು' ನಿಮ್ಮೆಲ್ಲರನ್ನು ರಂಜಿಸಲು ಬರುತ್ತಿದ್ದಾಳೆ.
ತೀರ್ಥಹಳ್ಳಿಯ ಪ್ರಕೃತಿ ಮಡಿಲಲ್ಲಿ ಬೆಳೆದ 'ಸರಸು' ಮತ್ತು ಮೆಟ್ರೋ ಸಿಟಿಯ ಮಾಡರ್ನ್ ಹುಡುಗ ಅರವಿಂದ್ ನಡುವೆ ನಡೆಯುವ ಕಥೆಯೇ 'ಸರಸು'. ಉನ್ನತ ಶಿಕ್ಷಣದ ಕನಸು ಕಾಣುತ್ತಿರುವ ಸರಸು, ತನ್ನ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಎನ್ನುವುದು ಒಂದು ಕಡೆಯಾದರೆ, ಅವಳ ಈ ಕನಸಿನ ಪ್ರಯಾಣದಲ್ಲಿ ನಾಯಕ ಅರವಿಂದ್ ಹೂವಾಗುತ್ತಾನೋ ಮುಳ್ಳಾಗುತ್ತಾನೋ ಎಂಬ ಪ್ರಶ್ನೆ ಮತ್ತೊಂದು ಕಡೆ. ಈಗಾಗಲೇ ಧಾರಾವಾಹಿಯ ಪ್ರೋಮೋಗಳು ಕಿರುತೆರೆಯಲ್ಲಿ ಸದ್ದು ಮಾಡುತ್ತಿದೆ.
ಸರಳ ಸುಂದರಿಯಾದ ಸರಸು ಹಾಗೂ ಸ್ಟೈಲಿಷ್ ಅರವಿಂದ್ ಎಲ್ಲರಿಗೂ ಇಷ್ಟವಾಗಿದ್ದು ಧಾರಾವಾಹಿಯ ಅದ್ಧೂರಿ ಮೇಕಿಂಗ್ ಕೂಡಾ ಮೆಚ್ಚುಗೆ ಗಳಿಸಿದೆ. ಸುಪ್ರಿತಾ ಸತ್ಯನಾರಾಯಣ್ ಸರಸು ಪಾತ್ರದಲ್ಲಿ ಹಾಗೂ ಸ್ಕಂದ ಅಶೋಕ್ ಅರವಿಂದ್ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ನಟ ಅಭಿಜಿತ್ ಈ ಧಾರಾವಾಹಿ ಮೂಲಕ ಮತ್ತೆ ಕಿರುತೆರೆ ಪ್ರವೇಶಿಸಿದ್ದಾರೆ. ವೀಣಾ ಸುಂದರ್ ಮತ್ತು ಧರ್ಮೇಂದ್ರ ಅರಸ್ ಕೂಡಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೈಸೂರು ಮಂಜು ಸರಸು ಧಾರಾವಾಹಿಯನ್ನು ನಿರ್ದೇಶಿಸಿದ್ದು, ಜೀವ, ಛಾಯಾಗ್ರಹಣ ಮತ್ತು ಸುನಾದ್ ಗೌತಮ್ ಸಂಗೀತ ಈ ಧಾರಾವಾಹಿಗೆ ಇದೆ.