ಕರ್ನಾಟಕ

karnataka

ETV Bharat / sitara

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ

ಹತ್ತು ವರ್ಷಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಾಯಕಿಯಾಗಿ ಮೆರೆದ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಇಂದು 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ರಮ್ಯಾ
ರಮ್ಯಾ

By

Published : Nov 29, 2020, 2:03 PM IST

ಚಿತ್ರರಂಗ ಹಾಗೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಹತ್ತು ವರ್ಷಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಜನಪ್ರಿಯ ನಾಯಕಿಯಾಗಿ ಮೆರೆದ ರಮ್ಯಾ ಅವರು, ರಾಜಕೀಯಲ್ಲಿ ಕೂಡ ಒಂದು ಹಂತದ ಯಶಸ್ಸು ಕಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಎರಡು ಕ್ಷೇತ್ರಗಳಿಂದ ನೇಪಥ್ಯಕ್ಕೆ ಸರಿದಿರುವ ಅವರು, ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋವನ್ನು ಹರಿಬಿಡುವುದನ್ನು ಬಿಟ್ಟರೆ, ಅಷ್ಟೊಂದು ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ.

ರಮ್ಯಾ

2003ರಲ್ಲಿ ಪುನೀತ್​ಗೆ ನಾಯಕಿಯಾಗಿ 'ಅಭಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 2016 ರವರೆಗೆ ಸಕ್ರಿಯರಾಗಿದ್ದರು. ಉಪೇಂದ್ರ ಅವರ ಜೊತೆ ನಾಯಕಿಯಾಗಿ ಕೊನೆಯ ಬಾರಿ 'ನಾಗರಹಾವು' ಚಿತ್ರದಲ್ಲಿ ಅಭಿನಯಿಸಿದ್ದರು. 'ದಿಲ್ ಕಾ ರಾಜಾ' ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿಯಿದ್ದು, ಚಿತ್ರ ನಿರ್ಮಾಣ ಹಂತದಲ್ಲಿದೆ.

10 ವರ್ಷಗಳ ಕಾಲ ಸಕ್ರಿಯವಾಗಿ ಚಿತ್ರರಂಗದಲ್ಲಿ ಮೆರೆದ ಅವರು ಹಿರಿಯ ನಟ ಹಾಗೂ ರಾಜಕಾರಣಿ ಅಂಬರೀಶ್ ಅವರ ಪ್ರಭಾವದಿಂದ ರಾಜಕೀಯ ರಂಗ ಪ್ರವೇಶಿಸಿ 2012 ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. 2013 ರಲ್ಲಿ ನಡೆದ ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆಯಾದರು. ರಾಜ್ಯದಿಂದ ಲೋಕಸಭೆ ಪ್ರವೇಶಿಸಿದ ಕನ್ನಡದ ಮೊದಲ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆರು ತಿಂಗಳ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ವಿರುದ್ಧ 5,500 ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಉಪಚುನಾವಣೆಯಲ್ಲಿ ರಮ್ಯಾ ಪರ ಪ್ರಚಾರ ನಡೆಸಿದ್ದ ಅಂಬರೀಶ್, ಸಾರ್ವತ್ರಿಕ ಚುನಾವಣೆ ವೇಳೆ ದೂರ ಉಳಿಯುವ ಮೂಲಕ ರಮ್ಯಾ ಸೋಲಿಗೆ ಪರೋಕ್ಷವಾಗಿ ಕಾರಣರಾದರು ಎನ್ನಲಾಗದೆ. ನಂತರ ರಮ್ಯಾ ಅವರಿಗೆ ರಾಜಕೀಯ ಗುರುವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ ಕೃಷ್ಣ ಗುರುತಿಸಿಕೊಂಡಿದ್ದರು. ಚುನಾವಣೆ ಸೋಲಿನ ಬಳಿಕವೂ ಕಾಂಗ್ರೆಸ್ ನಲ್ಲಿಯೇ ಇದ್ದ ರಮ್ಯಾಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹುದ್ದೆಯನ್ನು ನೀಡಿ ಬೆಳೆಯಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ನಿಧಾನವಾಗಿ ರಾಜಕೀಯದಲ್ಲಿ ಅಷ್ಟೊಂದು ಸಕ್ರಿಯವಾಗಿ ಕಾಣದ ಹಿನ್ನೆಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಆರೋಪ ಹೊತ್ತರು. ಇದರ ಬೆನ್ನಲ್ಲೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನೇಪಥ್ಯಕ್ಕೆ ಸರಿದರು.

ರಮ್ಯಾ ಅವರು ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರು ಹಾಗೂ ರಾಜಕೀಯ ನಾಯಕರು ಇವರಿಗೆ ಶುಭಕೋರಿರುವುದನ್ನು ಹೊರತು ಪಡಿಸಿದರೆ ಬೇರೆ ಯಾವುದೇ ವಿಧದ ಹುಟ್ಟುಹಬ್ಬ ಆಚರಣೆಯ ಮಾಹಿತಿ ಲಭಿಸಿಲ್ಲ.

ABOUT THE AUTHOR

...view details