ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸಾರೆ' ಧಾರಾವಾಹಿಯಲ್ಲಿ ನಾಯಕ ಯುವರಾಜ ಆಗಿ ಅಭಿನಯಿಸುತ್ತಿರುವ ಸಾಗರ್ ಬಿಳಿಗೌಡ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಈ ವಿಚಾರವನ್ನು ಸಾಗರ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
'ಮನಸಾರೆ' ಧಾರಾವಾಹಿಯಿಂದ ಹೊರಬಂದ ನಾಯಕ ಸಾಗರ್ ಬಿಳಿಗೌಡ
'ಕಿನ್ನರಿ' ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಸಾಗರ್, ಮನಸಾರೆ ಧಾರಾವಾಹಿಯಲ್ಲಿ ನಾಯಕ ಯುವರಾಜನ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಅವರು ಈಗ ಧಾರಾವಾಹಿಯಿಂದ ಹೊರ ಬಂದಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸಹನಟಿಯರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿರುವ ಸಾಗರ್, ಶೂಟಿಂಗ್ನ ಸುಂದರ ಅನುಭವವನ್ನು ಹಂಚಿಕೊಂಡಿದ್ದಾರೆ. "ಶೂಟಿಂಗ್ ವೇಳೆ ಮತ್ತು ಡ್ಯಾನ್ಸ್ ಪ್ರಾಕ್ಟೀಸ್ ಸಮಯದಲ್ಲಿ ನಾವು ಕಳೆದ ಒಳ್ಳೆಯ ಸಮಯ ಈಗಲೂ ನನಗೆ ನೆನಪಿದೆ. ಈ ಸುಂದರ ಕ್ಷಣ ಮತ್ತೊಮ್ಮೆ ನನ್ನ ಜೀವನದಲ್ಲಿ ಮರಳಿ ಬರುವುದೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಕಳೆದ ಕ್ಷಣ ಮಾತ್ರ ಯಾವಾಗಲೂ ಸದಾ ನೆನಪಲ್ಲಿ ಇರುವುದಂತೂ ನಿಜ. ವಿಭಿನ್ನ ಕಥಾ ಹಂದರದ 'ಮನಸಾರೆ' ಧಾರಾವಾಹಿ ವೀಕ್ಷಕರ ಮನ ಸೆಳೆದಿತ್ತು. ಜೊತೆಗೆ ಈ ಇಬ್ಬರು ಕೂಡಾ ನನ್ನ ಮಿಲಿಯನ್ ಸುಂದರ ಕ್ಷಣಗಳಲ್ಲಿ ಜೊತೆಯಲ್ಲಿದ್ದರು. ಆದರೆ ಈಗ ಅಗಲುವಿಕೆ ಅನಿವಾರ್ಯವಾಗಿದೆ" ಎಂದು ಬರೆದುಕೊಂಡಿದ್ದಾರೆ ಸಾಗರ್.
ಆದರೆ ಧಾರಾವಾಹಿಯಿಂದ ಹೊರಬಂದಿರುವುದಕ್ಕೆ ಸಾಗರ್ ಕಾರಣ ಏನು ಎಂಬುದನ್ನು ಮಾತ್ರ ತಿಳಿಸಿಲ್ಲ. ಮೂಲಗಳ ಪ್ರಕಾರ ಮತ್ತೊಂದು ಹೊಸ ಧಾರಾವಾಹಿಯಲ್ಲಿ ಸಾಗರ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದೀಗ 'ಮನಸಾರೆ' ಧಾರಾವಾಹಿಯ ಸಾಗರ್ ಜಾಗಕ್ಕೆ ಯಾರು ಬರಲಿದ್ದಾರೆ ಕಾದು ನೋಡಬೇಕು. 'ಕಿನ್ನರಿ' ಧಾರಾವಾಹಿ ಮೂಲಕ ಸಾಗರ್ ಕಿರುತೆರೆಗೆ ಎಂಟ್ರಿ ನೀಡಿದ್ದರು.