ಭಾರತದ ಮೊಟ್ಟ ಮೊದಲ ವನ್ಯಜೀವಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ ಲಾಕ್ಡೌನ್ಗೂ ಮುನ್ನ ಮಲ್ಟಿಪ್ಲೆಕ್ಸ್ನಲ್ಲಿ ಪ್ರದರ್ಶನಗೊಂಡಿತ್ತು. ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ ಕೂಡಾ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು.
ಇಂಗ್ಲೀಷ್ ಭಾಷೆಯಲ್ಲಿದ್ದ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ಇದೀಗ ಕನ್ನಡದಲ್ಲಿ ನೋಡುವ ಸುವರ್ಣಾವಕಾಶ ಬಂದಿದೆ. ನಟ, ನಿರ್ದೇಶಕ ರಿಷಭ್ ಶೆಟ್ಟಿ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಸದ್ಯ ರಿಷಭ್ ಶೆಟ್ಟಿ ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವ ಪ್ರೊಮೋ ರಿಲೀಸ್ ಆಗಿದೆ. ಕರ್ನಾಟಕ ಅರಣ್ಯ ಇಲಾಖೆ ಸಹಯೋಗದೊಂದಿಗೆ, ಡಿಸ್ಕವರಿ ಚಾನಲ್ ನಿರ್ಮಾಣ ಮಾಡಿರುವ ಈ ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗೆ ಡಬ್ಬಿಂಗ್ ಆಗಿ ಬರುತ್ತಿದೆ. ತೆಲುಗು ಹಾಗೂ ತಮಿಳು ಭಾಷೆಗೆ ಬಹುಭಾಷಾ ನಟ ಪ್ರಕಾಶ್ ರೈ ಡಬ್ಬಿಂಗ್ ಮಾಡಿದ್ದು, ಹಿಂದಿಯಲ್ಲಿ ರಾಜ್ಕುಮಾರ್ ರಾವ್ ಡಬ್ಬಿಂಗ್ ಮಾಡಿದ್ದಾರೆ.