ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ನಾಯಕ ಶಶಾಂಕ್ ತಂದೆ ಪಾತ್ರದಲ್ಲಿ ನಟಿಸುತ್ತಿರುವ ರವಿ ಭಟ್, ಕಿರುತೆರೆ ವೀಕ್ಷಕರಿಗೆ ಪರಿಚಿತ ಮುಖ. ಪೋಷಕ ಪಾತ್ರಗಳ ಮೂಲಕ ಮನೆ ಮಾತಾಗಿರುವ ರವಿ ಭಟ್ ಪಿ. ಶೇಷಾದ್ರಿ ನಿರ್ದೇಶನದ 'ಸುಪ್ರಭಾತ' ಧಾರಾವಾಹಿ ಮೂಲಕ ಕಿರುತೆರೆ ಪಯಣ ಶುರು ಮಾಡಿದರು.
ಪೋಷಕ ಪಾತ್ರಗಳ ಮೂಲಕ ಬೆಳ್ಳಿತೆರೆ, ಕಿರುತೆರೆಯಲ್ಲಿ ಬ್ಯುಸಿ ಆಗಿರುವ ರವಿ ಭಟ್ - Ravi Bhat acted in Tulu movie
ಧಾರಾವಾಹಿ, ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ವೀಕ್ಷಕರಿಗೆ ಪರಿಚಿತರಾಗಿರುವ ರವಿ ಭಟ್, ತಮಿಳು ಹಾಗೂ ತೆಲುಗು ಕಿರುತೆರೆಯಲ್ಲೂ ಮಿಂಚಿದ್ದಾರೆ. ಸದ್ಯಕ್ಕೆ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ರವಿ ಭಟ್ ಬ್ಯುಸಿ ಆಗಿದ್ದಾರೆ.
ಸುಪ್ರಭಾತ, ಮಹಾಭಾರತ, ಮೊಗ್ಗಿನ ಮನಸ್ಸು, ಸೀತೆ, ರಾಧಾ, ಅರಸಿ, ಜಾನಕಿ ರಾಘವ, ನಂದಿನಿ ಧಾರಾವಾಹಿ ಸೇರಿದಂತೆ ಬಹಳಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ರವಿ ಭಟ್ ಇತ್ತೀಚೆಗೆ ಪ್ರಸಾರ ನಿಲ್ಲಿಸಿದ್ದ'ಪ್ರೇಮಲೋಕ 'ಧಾರಾವಾಹಿಯಲ್ಲಿ ಕೂಡಾ ನಾಯಕಿಯ ತಂದೆಯಾಗಿ ನಟಿಸಿದ್ದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಾಯಕಿ ಅಂಜಲಿ ಅಪ್ಪನಾಗಿ ನಟಿಸಿರುವ ಇವರು, ಇದೀಗ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ರವಿಭಟ್ ನಟನಾ ಪ್ರತಿಭೆ ಕೇವಲ ಕನ್ನಡ ಕಿರುತೆರೆಗೆ ಮಾತ್ರ ಸೀಮಿತವಲ್ಲ. ತೆಲುಗಿನ ಮೇಘಮಾಲ ಧಾರಾವಾಹಿ, ಶಿರಡಿ ಸಾಯಿ ಸಿನಿಮಾ, ತಮಿಳಿನ ಮಹಾಭಾರತ, ಚಿನ್ನತೆರೈ ಧಾರಾವಾಹಿಗಳನ್ನು ನಟಿಸುವ ಮೂಲಕ ಪರಭಾಷೆಯಲ್ಲೂ ಮಿಂಚಿದ್ದಾರೆ.
'ಭುವನ ಜ್ಯೋತಿ' ಎಂಬ ಸಿನಿಮಾದಲ್ಲಿ ಏಸು ಕ್ರಿಸ್ತನ ಪಾತ್ರ ಮಾಡುವ ಮೂಲಕ ಹಿರಿತೆರೆಗೆ ಕಾಲಿಟ್ಟ ರವಿ ಭಟ್, ಮಿಸ್ಟರ್ ಅ್ಯಂಡ್ ಮಿಸೆಸ್ ರಾಮಚಾರಿ, ಚಮಕ್, ಉಪ್ಪು ಹುಳಿ ಖಾರ, ಬೀರಬಲ್, ಸೀತಾರಾಮ ಕಲ್ಯಾಣ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಪಡ್ಡಾಯಿ' ಎನ್ನುವ ತುಳು ಸಿನಿಮಾದಲ್ಲಿ ನಟಿಸುವ ಮೂಲಕ ಕೋಸ್ಟಲ್ವುಡ್ ಮಂದಿಗೂ ಇವರು ಪರಿಚಿತರಾಗಿದ್ದಾರೆ.