ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮೂರುಗಂಟು' ಧಾರಾವಾಹಿಯಲ್ಲಿ ನಾಯಕ ವಿಕ್ರಮಾದಿತ್ಯನ ಪ್ರೇಯಸಿ ವೈಷ್ಣವಿಯಾಗಿ ಪರದೆ ಹಂಚಿಕೊಳ್ಳುವ ಮೂಲಕ ರಶ್ಮಿತಾ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.
'ಗಟ್ಟಿಮೇಳ'ದ ನೆಗೆಟಿವ್ ರೋಲ್ನಲ್ಲಿ ಕಿರುತೆರೆ ವೀಕ್ಷಕರ ಮನಗೆದ್ದ ರಶ್ಮಿತಾ, ಇದೀಗ ಮರಳಿ ಬಂದಿರುವುದು ವೀಕ್ಷಕರಿಗೆ ಮತ್ತಷ್ಟು ಖುಷಿ ತಂದಿದೆ. ಕೊಡಗಿನ ಕುವರಿ ರಶ್ಮಿತಾ 'ಮೂರುಗಂಟು' ಧಾರಾವಾಹಿಯಲ್ಲಿ ಎರಡು ಶೇಡ್ನ ಮೂಲಕ ವೀಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರಂತೆ.
'ಮೂರುಗಂಟು' ಧಾರಾವಾಹಿಯಲ್ಲಿ ನಾನು ನಾಯಕನ ಮಾಜಿ ಪ್ರೇಯಸಿ ಆಗಿ ಅಭಿನಯಿಸುತ್ತಿದ್ದೇನೆ. ನಾಯಕಿಯ ಮುಂದೆ ಒಳ್ಳೆಯವಳಂತೆ ನಟಿಸುವ ನಾನು ವಿಲನ್ ಕೂಡಾ ಹೌದು. ನಾಯಕಿ ಮತ್ತು ನಾಯಕನನ್ನು ದೂರ ಮಾಡುವುದೇ ನನ್ನ ಗುರಿ. ಇದರ ಜೊತೆಗೆ ನಾನು ಅದ್ಯಾಕೆ ಈ ಮೊದಲು ಅವನಿಂದ ದೂರವಾದೆ ಎಂಬುದಕ್ಕೆ ಉತ್ತರವೂ ಮುಂದಿನ ದಿನಗಳಲ್ಲಿ ದೊರಕಲಿದೆ ಎಂದು ವೈಷ್ಣವಿ ಪಾತ್ರದ ಬಗ್ಗೆ ರಶ್ಮಿತಾ ಧಾರಾವಾಹಿಯ ಸಿಕ್ರೇಟ್ ಬಿಚ್ಚಿಟ್ಟರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾರಾಣಿ' ಧಾರಾವಾಹಿಯಲ್ಲಿ ಇಶಾ ಅಲಿಯಾಸ್ ಅವನಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದ ಕೊಡಗಿನ ಕುವರಿ ಮೊದಲ ಧಾರಾವಾಹಿಯಲ್ಲಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ನೆಗೆಟಿವ್ ಪಾತ್ರವನ್ನೇ ಅತಿಯಾಗಿ ಪ್ರೀತಿಸುವ ರಶ್ಮಿತಾ, 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಲನ್ ಸಾರಿಕಾ ಆಗಿ ನಟಿಸಿದ್ದರು.
ನೆಗೆಟಿವ್ ರೋಲ್ಗೆ ಅವಕಾಶ ಜಾಸ್ತಿ ಎಂದು ನಂಬಿರುವ ರಶ್ಮಿತಾ ಇದೀಗ ಮತ್ತೆ ತಮ್ಮಿಷ್ಟದ ವಿಲನ್ ಪಾತ್ರಕ್ಕೆ ಜೀವ ತುಂಬಲು ತಯಾರಿ ನಡೆಸಿದ್ದಾರೆ. 'ಗಟ್ಟಿಮೇಳ' ಧಾರಾವಾಹಿಯ ನಂತರ ತಮ್ಮ ಹುಟ್ಟೂರು ಕೊಡಗಿಗೆ ಹೋದ ರಶ್ಮಿತಾ, ಮನೆಯವರೊಂದಿಗೆ ಕಾಲ ಕಳೆದರು. ಆದರೆ, ಧಾರಾವಾಹಿಯ ಸೆಟ್, ಶೂಟಿಂಗ್ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ, 'ಮೂರುಗಂಟು' ಮೂಲಕ ಮತ್ತೆ ನಟನಾ ರಂಗಕ್ಕೆ ಮರಳಿದ್ದಾರೆ. ಪರಭಾಷೆಯಿಂದಲೂ ಒಂದಷ್ಟು ಅವಕಾಶಗಳು ಬರುತ್ತಿದ್ದರೂ ಕೊರೊನಾ ಕಾರಣದಿಂದಾಗಿ ಅದರ ಬಗ್ಗೆ ಆಲೋಚನೆಯೇ ಮಾಡಿಲ್ಲ ಎಂಬ ಮಾತು ಸಹ ಕೇಳಿ ಬರುತ್ತಿದೆ.