ಕೆಲ ದಿನಗಳ ಹಿಂದೆಯಷ್ಟೇ ಕನ್ನಡ ಮಾತಾಡೋದು ಸ್ವಲ್ಪ ಕಷ್ಟ ಎಂದು ಹೇಳಿ ಸಂಕಷ್ಟ ತಂದುಕೊಂಡಿದ್ದ ಈ ಕೊಡವತಿ, ಈಗ ಮತ್ತೊಮ್ಮೆ ಅದನ್ನೇ ಮಾಡಿದ್ದಾರೆ. 11 ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡು ದಾಖಲೆ ಬರೆದಿರುವ ಕನ್ನಡ ಚಿತ್ರರಂಗಕ್ಕೆ ವಿಶ್ ಮಾಡುವುದನ್ನು ಮರೆತಿದ್ದಾರೆ ಎಂದು ಕನ್ನಡಿಗರು ರಶ್ಮಿಕಾ ಮೇಲೆ ಕೋಪಗೊಂಡಿದ್ದಾರೆ.
ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳಿಗೆ ವಿಶ್ ಮಾಡದ ರಶ್ಮಿಕಾ: ಮತ್ತೆ ಕೆಂಡ ಕಾರಿದ ನೆಟ್ಟಿಜನ್ಸ್! - Rashmika mistake
ನಟಿ ರಶ್ಮಿಕಾ ಮಂದಣ್ಣ ಪದೇ ಪದೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕನ್ನಡ ಡಬ್ಬಿಂಗ್ ಕಷ್ಟ ಎಂದಿದ್ದ ರಶ್ಮಿಕಾ ಮಂದಣ್ಣ ವಿರುದ್ಧ ಸಾಕಷ್ಟು ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಇದೀಗ ರಶ್ಮಿಕಾ ಮತ್ತೆ ಅದೇ ತಪ್ಪು ಮಾಡಿದ್ದಾರೆ.
![ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳಿಗೆ ವಿಶ್ ಮಾಡದ ರಶ್ಮಿಕಾ: ಮತ್ತೆ ಕೆಂಡ ಕಾರಿದ ನೆಟ್ಟಿಜನ್ಸ್! ](https://etvbharatimages.akamaized.net/etvbharat/prod-images/768-512-4090734-835-4090734-1565363636722.jpg)
ಇಂದು ಪ್ರಕಟಗೊಂಡ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡ ಚಿತ್ರರಂಗ ಮೇಲುಗೈ ಸಾಧಿಸಿದೆ. ಬರೋಬ್ಬರಿ 11 ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಇದೇ ವೇಳೆ, ಅತ್ಯುತ್ತಮ ನಟಿ ಪ್ರಶಸ್ತಿಗೆ ಕಾಲಿವುಡ್ ನಟಿ ಕೀರ್ತಿ ಸುರೇಶ್ ಭಾಜನರಾಗಿದ್ದಾರೆ. ಇವರಿಗೆ ಶುಭಾಶಯ ತಿಳಿಸಿರುವ ರಶ್ಮಿಕಾ, ಕನ್ನಡದ ಚಿತ್ರಗಳಿಗೆ ಅಭಿನಂದನೆ ಸಲ್ಲಿಸುವುದನ್ನು ಮರೆತಂತಿದೆ. ರಶ್ಮಿಕಾಳ ಈ ನಡೆಗೆ ಕೆರಳಿರುವ ಕನ್ನಡಿಗರು ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
ಈ ಮೊದಲು ಕೇವಲ ಪರಭಾಷೆ ತಾರೆಯರಿಗೆ ಮಾತ್ರ ಹುಟ್ಟುಹಬ್ಬದ ವಿಶ್ ಮಾಡ್ತಾರೆ ಎನ್ನುವ ಆರೋಪ ರಶ್ಮಿಕಾ ವಿರುದ್ಧ ಕೇಳಿ ಬಂದಿತ್ತು. ಅಂದು ಕೂಡ ಕನ್ನಡಿಗರು ಈ ನಟಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಮತ್ತೊಮ್ಮೆ ರಶ್ಮಿಕಾ ಕನ್ನಡ ಚಿತ್ರಗಳಿಗೆ ವಿಶ್ ಮಾಡದಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.