ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಬ್ಯೂಟಿಫುಲ್ ವಿಲನ್ ಕವಿತಾ ಆಗಿ ನಟಿಸಿರುವ ಬ್ಯೂಟಿ ಹೆಸರು ರಮ್ಯಾ ಆಲಿಯಾಸ್ ಕೋಳಿ ರಮ್ಯಾ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ನೋಡಿರುವವರಿಗೆ ಕೋಳಿ ರಮ್ಯಾ ಚೆನ್ನಾಗಿ ನೆನಪಿರುತ್ತಾರೆ.
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಮೂಲಕ ಹೆಸರಾದ ಕೋಳಿ ರಮ್ಯಾ ವಿಲನ್ ಎಂದರೆ ಕವಿತಾ ರೀತಿ ಇರಬೇಕು ಎಂದು ವೀಕ್ಷಕರು ಉದ್ಘರಿಸಿದ್ದೂ ಇದೆ ರಮ್ಯಾ ಅಷ್ಟರ ಮಟ್ಟಿಗೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರೂಪಕಿಯಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟ ರಮ್ಯಾ, ಕನ್ನಡದ ಜೊತೆಗೆ ತೆಲುಗು, ತಮಿಳು ಕಿರುತೆರೆಯಲ್ಲಿ ಕೂಡಾ ಮಿಂಚಿದ್ದಾರೆ. ತ್ರಿಭಾಷಾ ಕಿರುತೆರೆ ನಟಿಯಾಗಿರುವ ಈಕೆ ಕನ್ನಡದ ಮಿಥುನರಾಶಿಯ ಜೊತೆಗೆ ತಮಿಳಿನ 'ಸತ್ಯ' ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದರೂ ಜನರ ಮನದಲ್ಲಿ ಸ್ಥಾನ ಪಡೆದಿರುವ ರಮ್ಯಾ ಗೆ ಹೆಸರು ತಂದುಕೊಟ್ಟಿದ್ದು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ.
ಮೂರು ಭಾಷೆಗಳಲ್ಲಿ ನಟಿಸುತ್ತಿರುವ ರಮ್ಯಾ ಕೋಳಿ ರಮ್ಯಾ ಎಂದು ಹೆಸರು ಬರಲು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಕಾರಣ. ಆ ರಿಯಾಲಿಟಿ ಶೋನಲ್ಲಿ ಕೋಳಿ ಹಿಡಿಯುವ ಪಂದ್ಯದಲ್ಲಿ ರಮ್ಯಾ ಪ್ರದರ್ಶಿಸಿದ ಚಾಣಾಕ್ಷತೆಯೇ ಈಕೆಗೆ ಆ ಹೆಸರು ಬರಲು ಕಾರಣ. ನಂತರ 'ಹಳ್ಳಿ ಹೈದ ಪ್ಯಾಟೆಗ್ ಬಂದ' ರಿಯಾಲಿಟಿ ಶೋನಲ್ಲಿ ಬ್ಯುಸಿಯಾದ ಭದ್ರಾವತಿ ಬೆಡಗಿ ರಮ್ಯಾಗೆ ನಟನೆ ಬಗ್ಗೆ ಇದ್ದ ಆಸಕ್ತಿಯಿಂದ ಕಿರುತೆರೆಗೆ ಕಾಲಿಟ್ಟರು. ಅದರ ಜೊತೆಗೆ ದುಡಿಯುವ ಅನಿವಾರ್ಯತೆ ಕೂಡಾ ಅವರಿಗಿತ್ತು. ತಂದೆ ಅಗಲಿಕೆಯಿಂದ ಮನೆಯಲ್ಲಿ ಉಂಟಾದ ಆರ್ಥಿಕ ಸಮಸ್ಯೆಯನ್ನು ದೂರ ಮಾಡಲು ನಟನಾ ಕ್ಷೇತ್ರವನ್ನು ಆಯ್ದುಕೊಂಡ ರಮ್ಯಾ ಬಸ್ ಹತ್ತಿ ಮಹಾನಗರಿಗೆ ಕಾಲಿಟ್ಟಾಗ ಕೇವಲ 9 ನೇ ತರಗತಿ ವಿದ್ಯಾರ್ಥಿನಿ.
'ಮಿಥುನ ರಾಶಿ' ಧಾರಾವಾಹಿಯ ವಿಲನ್ ಕವಿತಾ ಆಗಿ ರಮ್ಯಾ ಫೇಮಸ್ ಸುವರ್ಣ ವಾಹಿನಿಯ 'ತನನಂ ತನನಂ' ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಪಡೆದ ಈಕೆ ವಾರಾಂತ್ಯದಲ್ಲಿ ಭದ್ರಾವತಿಯಿಂದ ಬೆಂಗಳೂರಿಗೆ ಬಂದು ಶೂಟಿಂಗ್ನಲ್ಲಿ ಭಾಗಿಯಾಗುತ್ತಿದ್ದರು. 'ಸೊಸೆ ತಂದ ಸೌಭಾಗ್ಯ' ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ ಈಕೆ ಮುಂದೆ 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ಮಹೇಶನ ದೊಡ್ಡಮ್ಮ ಆಗಿ ನಟಿಸಿ ಕೂಡಾ ಸೈ ಎನಿಸಿಕೊಂಡಿದ್ದಾರೆ. ಈ ಧಾರಾವಾಹಿ ನಂತರ ಪರಭಾಷೆ ಧಾರಾವಾಹಿಗಳಲ್ಲಿ ನಟಿಸಿ ಅಲ್ಲೂ ಛಾಪು ಮೂಡಿಸಿದ್ದ ರಮ್ಯಾ ಮತ್ತೆ ಕನ್ನಡಕ್ಕೆ ಮರಳಿ ಬರಲು ಅವರ ಅಮ್ಮನೇ ಕಾರಣ. ರಮ್ಯಾ ತಾಯಿಗೆ ಮಗಳು ಮತ್ತೆ ಕನ್ನಡ ಭಾಷೆಯಲ್ಲಿ ನಟಿಸೇಕೆಂಬ ಹಂಬಲ. ಅದನ್ನು ಈಡೇರಿಸುವ ಸಲುವಾಗಿಯೇ ರಮ್ಯಾ ಮತ್ತೆ ಕನ್ನಡ ಕಿರುತೆರೆಗೆ ಕಾಲಿಟ್ಟರು.
ಮೊದಲಿಗಿಂತ ಸಖತ್ ಬ್ಯೂಟಿ ಆಗಿ ಕಾಣುತ್ತಿರುವ ಚೆಲುವೆ 'ಮಿಥುನ ರಾಶಿ' ಯ ಕವಿತಾ ಆಗಿ ಮನೆ ಮಾತಾಗಿರುವ ಕೋಳಿ ರಮ್ಯಾ ಸದ್ಯಕ್ಕೆ ಕಿರುತೆರೆ ಲೋಕದಲ್ಲೇ ಕಂಫರ್ಟಬಲ್ ಇದ್ದಾರಂತೆ. ಅವರಿಗೆ ಇಲ್ಲೇ ಸಾಕಷ್ಟು ಅವಕಾಶಗಳು ಕೂಡಾ ದೊರೆಯುತ್ತಿದೆ. ನನ್ನ ಮೊದಲ ಪ್ರಾಮುಖ್ಯತೆ ಏನಿದ್ದರೂ ಕಿರುತೆರೆಗೆ ಎನ್ನುವ ರಮ್ಯಾಗೆ ಅವಕಾಶ ದೊರೆತರೆ ಸಿನಿಮಾದಲ್ಲಿ ನಟಿಸುವ ಆಸೆಯಿದೆ.
ತಮಿಳು, ತೆಲುಗಿನಲ್ಲೂ ಮನೆ ಮಾತಾಗಿರುವ ನಟಿ