ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಆಡುಭಾಷೆಯ ಸೊಬಗಿನ ಗಿಣಿರಾಮ ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಗಿಣಿರಾಮ ಧಾರಾವಾಹಿಯಲ್ಲಿ ಆಯಿ ಸಾಹೇಬ ಮಗ ರಣಧೀರ ಆಗಿ ಅಭಿನಯಿಸುತ್ತಿದ್ದ ವರುಣ್ ಹೆಗಡೆ ಇದೀಗ ಕಾರಣಾಂತರಗಳಿಂದ ಪಾತ್ರದಿಂದ ಹೊರ ಬಂದಿದ್ದಾರೆ. ಆ ಜಾಗಕ್ಕೆ ಹೊಸ ನಟನ ಎಂಟ್ರಿಯೂ ಆಗಿದೆ.
ಅಂದ ಹಾಗೇ ಈಗಾಗಲೇ ಕಿರುತೆರೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರಾಮ್ ಪವನ್ ಶೇಠ್ ಇದೀಗ ರಣಧೀರನಾಗಿ ನಿಮ್ಮ ಮುಂದೆ ಬರಲಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ರಾಮ್ ಪವನ್ ಶೇಠ್ ಅವರೇ ಹಂಚಿಕೊಂಡಿದ್ದಾರೆ.
"ಎಲ್ಲರಿಗೂ ನಮಸ್ಕಾರ. ಇನ್ಮುಂದೆ ನಾನು ರಣಧೀರನಾಗಿ ಗಿಣಿರಾಮ ಧಾರಾವಾಹಿಯಲ್ಲಿ ಬರುತ್ತಿದ್ದೇನೆ, ಆಶೀರ್ವದಿಸಿ" ಎಂದು ತಮ್ಮ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರೀತಿಗಾಗಿ ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ ರಾಮ್ ಪವನ್ ಶೇಠ್ ಮುಂದೆ ಮನೆದೇವ್ರು ಧಾರಾವಾಹಿಯಲ್ಲಿ ಖಳನಾಯಕ ಕಿರಣ್ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
ಮನೆದೇವ್ರು ಧಾರಾವಾಹಿಯ ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ರಾಮ್ ಪವನ್ ಶೇಠ್ ತದ ನಂತರ ಬ್ರಹ್ಮಗಂಟು ಧಾರಾವಾಹಿಯಲ್ಲಿ ಧೀರಜ್ ಆಗಿ ನೆಗೆಟಿವ್ ರೋಲ್‌ನಲ್ಲಿ ನಟಿಸಿದರು. ಇದೀಗ ಗಿಣಿರಾಮ ಧಾರಾವಾಹಿಯಲ್ಲೂ ಖಳನಾಯಕರಾಗಿ ಅಬ್ಬರಿಸಲಿರುವ ರಾಮ್ ಪವನ್ ಶೇಠ್, ಒಂದರ ಮೇಲೆ ಒಂದೊಂದಾಗಿ ಅವಕಾಶಗಳನ್ನು ಪಡೆಯುತ್ತಿದ್ದಾರೆ.