ಕರ್ನಾಟಕ

karnataka

ವಸಂತನಾಗಿ ಮತ್ತೆ ಕಿರುತೆರೆಯತ್ತ ಮುಖ ಮಾಡಿದ ರಕ್ಷಿತ್ ಅರಸ್

By

Published : Aug 31, 2020, 4:51 PM IST

'ಮಹಾದೇವಿ', 'ಮಾಂಗಲ್ಯಂ ತಂತುನಾನೇನ', 'ಯಜಮಾನಿ' ಧಾರಾವಾಹಿಗಳಲ್ಲಿ ನಟಿಸಿರುವ ರಕ್ಷಿತ್ ಇದೀಗ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ವಸಂತನ ಪಾತ್ರ ಮಾಡುತ್ತಿದ್ದ ವಿವೇಕ್ ಸಿಂಹ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಹೋಗಿದ್ದಾರೆ.

Rakshit urs came back to serial
ರಕ್ಷಿತ್ ಅರಸ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮತ್ತೆ ವಸಂತ ' ಧಾರಾವಾಹಿಯಲ್ಲಿ ನಾಯಕ ವಸಂತ ಆಗಿ ಅಭಿನಯಿಸುತ್ತಿದ್ದ ವಿವೇಕ್ ಸಿಂಹ, ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದು ಇದೀಗ ವಿವೇಕ್ ಸಿಂಹ ಬದಲಿಗೆ ರಕ್ಷಿತ್ ಅರಸ್ ಇನ್ಮುಂದೆ ವಸಂತ ಆಗಿ ನಟಿಸಲಿದ್ದಾರೆ.

ಮೈಸೂರಿನ ಪ್ರತಿಭೆ ರಕ್ಷಿತ್ ಅರಸ್

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತುನಾನೇನ ' ಧಾರಾವಾಹಿಯಲ್ಲಿ ನಾಯಕ ತೇಜಸ್ವಿ ಅಣ್ಣ, ಧೀರಜ್ ಆಗಿ ಅಭಿನಯಿಸಿರುವ ರಕ್ಷಿತ್​​ಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು. ಸಾಂಸ್ಕೃತಿಕ ನಗರಿ ಮೈಸೂರಿನ ರಕ್ಷಿತ್ ವಿದ್ಯಾಭ್ಯಾಸದ ಬಳಿಕ ಸೇರಿದ್ದು ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆಗೆ. ಅಲ್ಲಿ ನಟನೆಯ ರೀತಿ ನೀತಿಗಳನ್ನು ಅರಿತ ರಕ್ಷಿತ್, ಒಂದಷ್ಟು ನಾಟಕಗಳಲ್ಲಿ ನಟಿಸಿದರು.

ಮಹಾದೇವಿ ಧಾರಾವಾಹಿ ಮೂಲಕ ಕಿರುತೆರೆ ಪಯಣ ಆರಂಭಿಸಿದ ರಕ್ಷಿತ್

ಹುಬ್ಬಳ್ಳಿಯಲ್ಲಿ ಆ್ಯಕ್ಟಿಂಗ್​​​​​ ಕೋರ್ಸ್ ಮಾಡಿದ ರಕ್ಷಿತ್, ಅಲ್ಲಿ ಪ್ರಿನ್ಸಿಪಾಲ್ ಆಗಿದ್ದ ನಟರಾಜ್ ಹೊನ್ನವಳ್ಳಿ ಅವರ ಗರಡಿಯಲ್ಲಿ ಪಳಗಿದರು. ನಾಟಕಗಳೊಂದಿಗೆ ಮೈಮ್, ಯಕ್ಷಗಾನ ಮುಂತಾದ ಕಲೆಯ ಪ್ರಾಕಾರಗಳಲ್ಲೂ ರಕ್ಷಿತ್ ತೊಡಗಿಸಿಕೊಂಡರು. ಕೋರ್ಸ್ ಮುಗಿದ ನಂತರ ಶಾಲಾ ವಿದ್ಯಾರ್ಥಿಗಳಿಗೆ ವರ್ಕ್ ಶಾಪ್ ಮತ್ತು ನಾಟಕಗಳನ್ನು ಕಲಿಸುವ ಜೊತೆಗೆ ಆಡಿಷನ್​​​​​​​​​​​​​​​​​​ಗಳಲ್ಲೂ ಭಾಗವಹಿಸುತ್ತಿದ್ದ ರಕ್ಷಿತ್ ಧಾರಾವಾಹಿಯಲ್ಲಿ ನಟಿಸಲು ಆಯ್ಕೆ ಆದರು. ಶ್ರುತಿ ನಾಯ್ಡು ನಿರ್ದೇಶನದ 'ಮಹಾದೇವಿ ' ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದ ರಕ್ಷಿತ್, ಶ್ರುತಿ ಅವರಿಂದ ಕೂಡಾ ನಟನೆ ಬಗ್ಗೆ ತಿಳಿದುಕೊಂಡರು.

ಮತ್ತೆ ವಸಂತ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಬಂದ ಯುವಕ

ಮಹಾದೇವಿ ಧಾರಾವಾಹಿಯ ನಂತರ ಅವಕಾಶಗಳು ಸಿಗದ ಕಾರಣ ಬೇರೆ ಕೆಲಸದತ್ತ ಮುಖ ಮಾಡಿದ್ದ ರಕ್ಷಿತ್ ಮತ್ತೆ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಕಾರಣ ರಘುಚರಣ್. ರಘು ನಿರ್ದೇಶನದ 'ಮಾಂಗಲ್ಯಂ ತಂತುನಾನೇನ' ಧಾರಾವಾಹಿಯಲ್ಲಿ ರಕ್ಷಿತ್ ಧೀರಜ್ ಪಾತ್ರದಲ್ಲಿ ನಟಿಸಿದ್ದರು. 'ಧೀರಜ್ ಪಾತ್ರ ನಿಜಕ್ಕೂ ತುಂಬಾ ಚಾಲೆಂಜಿಂಗ್ ಆಗಿತ್ತು. ಆ ಒಂದೇ ಪಾತ್ರದಲ್ಲಿ ಸಾಕಷ್ಟು ಏರಿಳಿತಗಳು ಇತ್ತು. ಧೀರಜ್​​ ಮುಗ್ಧ, ಬುದ್ಧಿವಂತ ಎಂದು ಎಲ್ಲರೂ ಅಂದು ಕೊಳ್ಳುತ್ತಿರುತ್ತಾರೆ. ಆದರೆ ಆತ ಗೋಮುಖ ವ್ಯಾಘ್ರ ಎಂಬುದು ಹಲವರಿಗೆ ತಿಳಿದಿಲ್ಲ. ಧೀರಜ್ ಪಾತ್ರ ಪ್ರೇಕ್ಷಕರಲ್ಲೂ ತುಂಬಾ ಕೋಪ ಕೆರಳಿಸುತ್ತಿತ್ತು. ಸೋಷಿಯಲ್ ಮೀಡಿಯಾದಲ್ಲಿ ಕೂಡಾ ವೀಕ್ಷಕರು ಆ ಪಾತ್ರದ ಬಗ್ಗೆ ಬೈದು ಕಮೆಂಟ್ ಮಾಡುತ್ತಿದ್ದರು. ಆಗಲೇ ನನಗೆ ಆ ಪಾತ್ರ ಪ್ರೇಕ್ಷಕರ ಮೇಲೆ ಅದೆಷ್ಟು ಪ್ರಭಾವ ಬೀರಿದೆ ಎಂದು ಅರಿವಾದದ್ದು' ಎನ್ನುತ್ತಾರೆ ರಕ್ಷಿತ್.

'ಮಾಂಗಲ್ಯಂ ತಂತುನಾನೇನ ' ಧಾರಾವಾಹಿಯ ಧೀರಜ್ ಆಗಿ ಹೆಸರಾದ ಹುಡುಗ

ನಂತರ 'ಯಜಮಾನಿ' ಧಾರಾವಾಹಿಯಲ್ಲಿ ಅಭಿನಯಿಸಿದ ರಕ್ಷಿತ್ ಅಲ್ಲಿಯೂ ತಮ್ಮ ನಟನಾ ಶೈಲಿಯ ಮೂಲಕ ಮನೆ ಮಾತಾದರು. ಕೊರೊನಾ ಲಾಕ್​​ಡೌನ್​​ ವೇಳೆ 'ಮಾಂಗಲ್ಯಂ ತಂತುನಾನೇನ' ಮತ್ತು 'ಯಜಮಾನಿ' ಧಾರಾವಾಹಿ ಮುಕ್ತಾಯಗೊಂಡಿತು‌. ನಂತರ ನಟನೆಯಿಂದ ದೂರವಿದ್ದ ರಕ್ಷಿತ್, ಇದೀಗ 'ಮತ್ತೆ ವಸಂತ' ಧಾರಾವಾಹಿಯ ವಸಂತನಾಗಿ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಮಾತ್ರವಲ್ಲ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ಪ್ರಯತ್ನ ಈಗ ನೆರವೇರಿತು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ ರಕ್ಷಿತ್.

ABOUT THE AUTHOR

...view details