ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಿರಂಜನ್ ಆಗಿ ಮನೆ ಮಾತಾಗಿರುವ ರಾಕೇಶ್ ಮಯ್ಯ ಇದೀಗ ಆರ್ಜೆ ಆಗಿ ಬದಲಾಗಿದ್ದಾರೆ. ಆಶ್ಚರ್ಯ ಪಡಬೇಡಿ. ಮಗಳು ಜಾನಕಿ ಧಾರಾವಾಹಿಯಿಂದ ರಾಕೇಶ್ ಮಯ್ಯ ಹೊರ ಬಂದು ಬೇರೆ ಕೆಲಸ ಆರಂಭಿಸಿದ್ದಾರಾ ಎಂದು ಕನ್ಫ್ಯೂಸ್ ಆಗಬೇಡಿ.
ಏಕ್ ದಿನ್ ಕಾ ಸುಲ್ತಾನ್...ಒಂದು ದಿನದ ಆರ್ಜೆ ಆದ 'ಮಗಳು ಜಾನಕಿ'ಯ ನಿರಂಜನ್ - ಒಂದು ದಿನದ ಆರ್ಜೆ ಆಗ ಬದಲಾದ ರಾಕೇಶ್ ಮಯ್ಯ
ನಿನ್ನೆ ಒಂದು ದಿನದ ಮಟ್ಟಿಗೆ ರಾಕೇಶ್ ಅವರು ಆರ್ಜೆ ರಾಕೇಶ್ ಆಗಿ ಬದಲಾಗಿದ್ದಾರೆ. ಆರ್ಜೆ ಸ್ಮಿತಾ ಮತ್ತು ಆರ್ಜೆ ಸ್ವರೂಪ್ ಅವರ ಸಹಕಾರದಿಂದಲೇ ತನ್ನ ಕನಸು ನನಸಾಯಿತು ಎಂದು ತಮ್ಮ ಸಂತೋಷವನ್ನು ವಿವರಿಸುವ ರಾಕೇಶ್ ಮಯ್ಯ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ರಾಕೇಶ್ ಮಯ್ಯ ಆರ್ಜೆ ಆಗಿರುವುದು ಕೇವಲ ಒಂದು ದಿನದ ಮಟ್ಟಿಗೆ. ಆ ಮೂಲಕ ತಮ್ಮ ಬಹು ವರ್ಷಗಳ ಕನಸನ್ನು ನನಸು ಮಾಡಿಕೊಂಡ ಸಂತಸದಲ್ಲಿ ಅವರಿದ್ದಾರೆ. ರಾಕೇಶ್ ಮಯ್ಯಗೆ ಆರ್ ಜೆ ಆಗಬೇಕು ಎಂಬ ಕನಸಿತ್ತು. ಒಂದೊಮ್ಮೆ ಇಂಟರ್ ವ್ಯೂ ನೆಪದಲ್ಲಿ ಮಂಗಳೂರಿನ ರೆಡಿಯೋ ಮಿರ್ಚಿಗೆ ಹೋಗಿದ್ದ ಅವರು, ಆರ್ಜೆ ಆಗಲು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬ ಪಟ್ಟಿ ತಯಾರು ಮಾಡಿ ತಂದಿದ್ದರು. ಮುಂದೆ ಆರ್ಜೆ ಕೆಲಸ ಖಾಲಿ ಇದೆ ಎಂದು ಎಂದು ಕಾಲ್ ಬಂದಾಗ ತಡಮಾಡದೆ ಆಡಿಶನ್ ಕೂಡಾ ಅಟೆಂಡ್ ಆಗಿದ್ದರು. ಆದರೆ ಸ್ಕ್ರಿಪ್ಟಿಂಗ್ ಹಂತದಲ್ಲಿ ಅವರು ಎಡವಿದ್ದು ಮಾತ್ರವಲ್ಲದೆ ಮಾತನಾಡುವಾಗಲೂ ಸೋತು ಬಿಟ್ಟರು. ಆರ್ಜೆಗಳಿಗೆ ಮಾತೇ ಬಂಡವಾಳ, ಮಾತಿನಲ್ಲಿಯೇ ಅವರು ಕೆಲಸ ಮಾಡುವುದು ಎಂದರೆ ತಪ್ಪಿಲ್ಲ.
ಇನ್ನು ಇದೆಲ್ಲಾ ಆಗಿ 8 ವರ್ಷಗಳೇ ಕಳೆದುಹೋಗಿವೆ. ಸದ್ಯ ರಾಕೇಶ್ ಮಯ್ಯ ಅವರು ಮಗಳು ಜಾನಕಿ ಯಲ್ಲಿ ಬ್ಯುಸಿ. ಇದರ ನಡುವೆ ಅವರ ಆಸೆ ಹೊಸವರ್ಷದಂದು ಈಡೇರಿದೆ. 2020 ಹೊಸ ವರ್ಷ ಮೊದಲ ದಿನದಂದು ತಮ್ಮ ಬಹುದಿನದ ಕನಸು ನನಸಾಗಿದ್ದಕ್ಕೆ ರಾಕೇಶ್ ಅವರು ಅತೀವ ಸಂತಸದಲ್ಲಿದ್ದಾರೆ. ನಿನ್ನೆ ಒಂದು ದಿನದ ಮಟ್ಟಿಗೆ ರಾಕೇಶ್ ಅವರು ಆರ್ಜೆ ರಾಕೇಶ್ ಆಗಿ ಬದಲಾಗಿದ್ದಾರೆ. ಆರ್ಜೆ ಸ್ಮಿತಾ ಮತ್ತು ಆರ್ಜೆ ಸ್ವರೂಪ್ ಅವರ ಸಹಕಾರದಿಂದಲೇ ತನ್ನ ಕನಸು ನನಸಾಯಿತು ಎಂದು ತಮ್ಮ ಸಂತೋಷವನ್ನು ವಿವರಿಸುವ ರಾಕೇಶ್ ಮಯ್ಯ 'ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ ಹೊಸ ವರ್ಷ ಹೊಸ ಕಲಿಕೆಗೆ ಅವಕಾಶವಾಗಲಿ. ಓದುವ ಸಂಭವ ಹೆಚ್ಚಾಗಲಿ. ಎತ್ತರಕ್ಕೆ ಏರಲು ಬೇಕಾದ ಸಾಮರ್ಥ್ಯ ಸಿಗಲಿ' ಎಂದು ಶುಭ ಕೋರಿದ್ದಾರೆ.