ಬಯಸದೆ ಬಣ್ಣದ ಲೋಕಕ್ಕೆ ಬಂದು ಮಿಂಚುತ್ತಿರುವ ಸಾಕಷ್ಟು ನಟ-ನಟಿಯರಿದ್ದಾರೆ. ಅದರಲ್ಲಿ ಕೆಲವರು ತಾವು ಊಹೆ ಮಾಡಿದ್ದಕ್ಕಿಂತ ದೊಡ್ಡ ಮಟ್ಟಕ್ಕೆ ಬೆಳೆದು ಕಿರುತೆರೆ ಪ್ರಿಯರ ಮನದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಆ ಸಾಲಿಗೆ ರಘು ಗೌಡ ಕೂಡಾ ಸೇರಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ರಾಜ್ ಗುರು ಮನೆತನದ ಹಿರಿಮಗ ಸಾಕೇತ್ ರಾಜ್ ಗುರು ಆಗಿ ರಘು ಗೌಡ ನಟಿಸುತ್ತಿದ್ದಾರೆ. ಡಿಗ್ರಿ ನಂತರ ಕಂಪನಿಯೊಂದರಲ್ಲಿ ರಘು ಗೌಡ ಒಂದಷ್ಟು ದಿನಗಳು ಕೆಲಸ ಮಾಡಿದ್ದರು. ಆದರೆ ಕೆಲಸದ ಮೇಲೆ ಆಸಕ್ತಿ ಇಲ್ಲದ ರಘು ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದರು. ಸ್ನೇಹಿತರ ಬಲವಂತಕ್ಕೆ ಆಡಿಷನ್ಗಳಲ್ಲಿ ಭಾಗವಹಿಸಲು ಆರಂಭಿಸಿದರು. ಫೋಟೋಶೂಟ್ ಕೂಡಾ ಮಾಡಿಸಿದರು. ಸತತ ಪ್ರಯತ್ನದ ನಂತರ ರವಿ ಗರಣಿ ನಿರ್ದೇಶನದ 'ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ' ಧಾರಾವಾಹಿಯಲ್ಲಿ ನಾಯಕ ರಂಗೇಗೌಡ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು.