ಕರ್ನಾಟಕ

karnataka

ETV Bharat / sitara

22ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನವೇ ಬದುಕಿಗೆ ವಿದಾಯ ಹೇಳಿದ 'ರಾಜಕುಮಾರ'..

ಯುವಕರ ಪಾಲಿನ ಕಣ್ಮಣಿ, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುತ್ತಿದ್ದವರು ಪುನೀತ್ ರಾಜ್‌ಕುಮಾರ್. ಬದುಕಿದ್ದರೆ, ಬರುವ ಡಿಸೆಂಬರ್ 1ರಂದು ಪತ್ನಿ ಅಶ್ವಿನಿ ಜತೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನ ಆಚರಿಸಿಕೊಳ್ಳಬೇಕಿತ್ತು. ಆದರೆ ಕ್ರೂರ ವಿಧಿಯಾಟದ ಮುಂದೆ ಪುನೀತ್ ಬಾರದ ಲೋಕಕ್ಕೆ ತೆರಳಿದ್ದಾರೆ.

Puneet Raj Kumar and Ashwini
ಪುನೀತ್​​ ರಾಜ್​​ಕುಮಾರ್​​ ಹಾಗು ಅಶ್ವಿನಿ

By

Published : Nov 4, 2021, 4:49 PM IST

ಕನ್ನಡ ಚಿತ್ರರಂಗದಲ್ಲಿ ಹೆಸರಿಗೆ ತಕ್ಕಂತೆ 'ರಾಜಕುಮಾರ'ನಾಗಿ ಮೆರೆದ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಚಿತ್ರರಂಗದಲ್ಲಿ 'ಅಪ್ಪು' ಎಂದೇ ಖ್ಯಾತರಾಗಿದ್ದ ಪುನೀತ್ ಅವರ ಸರಳತೆ, ಹವ್ಯಾಸ ಹಾಗು ಸಿನಿಮಾಗಳ ಬಗ್ಗೆ ಬಣ್ಣಿಸಲು ಪದಗಳಿಲ್ಲ.

ಪುನೀತ್​​ ರಾಜ್​​ಕುಮಾರ್

ಅಪ್ಪು ಎಲ್ಲರೂ ಮೆಚ್ಚುವಂತ ಮಗನಾಗಿ ಕೇವಲ ಸಿನಿಮಾಗಳಲ್ಲಿ ನಟಿಸಿಲ್ಲ. ಬದಲಾಗಿ ನಿಜ ಜೀವನದಲ್ಲಿಯೂ ಒಳ್ಳೆಯ ತಂದೆ, ಮಗ ಹಾಗು ಪತಿಯ ಕರ್ತವ್ಯವನ್ನ ಅಷ್ಟೇ ಚೆನ್ನಾಗಿ ನಿಭಾಯಿಸಿದ್ದರು. ಈ ಮಾತಿಗೆ ಪೂರಕವಾಗಿ ಸಿನಿಮಾದಲ್ಲಿ ಅದೆಷ್ಟೇ ಬ್ಯುಸಿ ಇದ್ದರೂ, ಫ್ಯಾಮಿಲಿ ಜತೆ ಕಾಲ ಕಳೆಯೋದನ್ನ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ.

ಪತ್ನಿ ಹಾಗು ಮಕ್ಕಳೊಂದಿಗೆ ಪವರ್​​ ಸ್ಟಾರ್​​

ಕನ್ನಡ ಚಿತ್ರರಂಗದ ಮೇಡ್ ಫಾರ್ ಈಚ್ ಅದರ್ ಎಂಬ ಜೋಡಿ ಎಂದು ಕರೆಸಿಕೊಂಡವರು ಪುನೀತ್ ರಾಜ್​​ಕುಮಾರ್ ಹಾಗು ಅಶ್ವಿನಿ ರೇವಂತ್​. ಈ ಆದರ್ಶ ದಂಪತಿ ಇದೇ ಡಿಸೆಂಬರ್ 1ಕ್ಕೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟದ ಮುಂದೆ, ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನವೇ ಅಪ್ಪು ಬಾರದ ಲೋಕಕ್ಕೆ ತೆರಳಿದ್ದಾರೆ.

ಪವರ್ ಸ್ಟಾರ್ 'ಪವರ್ ಫುಲ್' ಲವ್ ಸ್ಟೋರಿ:

ರಾಜ್​​ ವಂಶದ ಕಿರಿಯ ಮಗನಾಗಿರುವ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್, ಬಾಲ ನಟನಾಗಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದವರು. ಚಿಕ್ಕ ವಯಸ್ಸಿನಲ್ಲಯೇ ರಾಷ್ಟ್ರ ಪ್ರಶಸ್ತಿ ಪಡೆದಿರುವ ರಾಜರತ್ನ. ಸಿನಿಮಾರಂಗಕ್ಕೂ ಬರುವುದಕ್ಕಿಂತ ಮೊದಲು 1996ರ ಸಮಯದಲ್ಲಿ ಪಾರ್ವತಮ್ಮ ರಾಜ್​​ಕುಮಾರ್ ನಡೆಸುತ್ತಿದ್ದ ವಜ್ರೇಶ್ವರಿ ಸಂಸ್ಥೆಯ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದರು.

ಪತ್ನಿ ಅಶ್ವಿನಿಯೊಂದಿಗೆ ಅಪ್ಪು

ಈ ಮಧ್ಯೆ ಪುನೀತ್ ರಾಜ್‍ಕುಮಾರ್ ಮೌಂಟ್ ಕಾರ್ಮೆಲ್ ಕಾಲೇಜ್​​​ನಲ್ಲಿ ಓದುತ್ತಿದ್ದ ಅಶ್ವಿನಿ ಅವರನ್ನ ನೋಡಿ ಲವ್​​ನಲ್ಲಿ ಬಿದ್ದಿದ್ದರಂತೆ. ಒಮ್ಮೆ ಒಂದು ಕಾರ್ಯಕ್ರಮದಲ್ಲಿ ಅಶ್ವಿನಿ ಅವರನ್ನ ನೋಡಿದ ಪುನೀತ್ ಅವರಿಗೆ ಕಾಮನ್ ಫ್ರೆಂಡ್ ಮುಖಾಂತರ ಅಶ್ವಿನಿಯವರ ಪರಿಚಯವಾಗುತ್ತದೆ. ಅಶ್ವಿನಿ ಅವರು ಚಿಕ್ಕಮಗಳೂರಿನ ಮಲೆನಾಡು ಪ್ರದೇಶದವರು.ಇವರಿಬ್ಬರ ಸ್ನೇಹ ಗಾಢವಾಗಿ ಪ್ರೀತಿಗೆ ತಿರುಗಿತು.

ಮದುವೆಗೆ ಮೊದಲು ಗ್ರೀನ್ ಸಿಗ್ನಲ್ ಕೊಟ್ಟಿದ್ಯಾರು?:

ಇವರಿಬ್ಬರ ಪ್ರೀತಿಯ ವಿಚಾರವನ್ನು ಮೊದಲು ಮನೆಯಲ್ಲಿ ಹೇಳಿದವರು ಶಿವಣ್ಣ. ಆ ಸಂದರ್ಭದಲ್ಲಿ ಪಾರ್ವತಮ್ಮ ಈ ವಿಚಾರವನ್ನು ನಿಮ್ಮ ತಂದೆಯ ಬಳಿ ಹೇಳುವಂತೆ ಹೇಳಿದ್ದರಂತೆ. ಆಗ ಅಪ್ಪುಗೆ ಸಹಾಯ ಮಾಡಿದ್ದು, ಸಹೋದರ ಶಿವರಾಜ್ ಕುಮಾರ್.

ಅಪ್ಪಾಜಿಗೆ ವಿಷಯ ತಿಳಿಸಿದ್ದಾಗ ಅವರಿಬ್ಬರೂ ಒಪ್ಪಿದರೆ ಮದುವೆ ಆಗಲಿ ಎಂದು ಹೇಳಿದ್ರಂತೆ. ಈ ಮಾತನ್ನ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಪವರ್​​ ಸ್ಟಾರ್​​ ಹೇಳಿಕೊಂಡಿದ್ದರು.

ಪತ್ನಿ ಅಶ್ವಿನಿ ಜತೆ ಪುನೀತ್​​ ರಾಜ್​​ಕುಮಾರ್​​

1999 ಡಿ.1ರಂದು ಹಸೆಮಣೆ ಏರಿದ ದಂಪತಿ:

1999 ಡಿ.1ರಂದು, ಪುನೀತ್ ರಾಜ್​​ಕುಮಾರ್ ಅಶ್ವಿನಿ ಜತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ‌ಈ ಜೋಡಿಯನ್ನ ನೋಡಿ ಡಾ.ರಾಜ್​​ಕುಮಾರ್ ಮುದ್ದಾದ ಜೋಡಿ ಎಂದು ಶುಭಾ ಹಾರೈಸಿದ್ದರಂತೆ.

1999 ಡಿ.1ರಂದು ಹಸೆಮಣೆ ಏರಿದ ಪುನೀತ್​​ ರಾಜ್​​ಕುಮಾರ್​​ ಹಾಗು ಅಶ್ವಿನಿ

ಇದಾದ ಮೂರು ವರ್ಷದ ನಂತರ ಅಂದರೆ 2002ರಲ್ಲಿ 'ಅಪ್ಪು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರವಸೆಯ ಯುವ ನಾಯಕ ನಟನಾಗಿ ಕಾಲಿಡುತ್ತಾರೆ. ಅಂದಿನಿಂದ‌ ಪುನೀತ್ ರಾಜ್‍ಕುಮಾರ್ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಆಗಿ ಮಿಂಚಿದ್ದು, ಈಗ ಇತಿಹಾಸ.

ಪುನೀತ್ ರಾಜ್‍ಕುಮಾರ್ ಇಂದು ಬದುಕಿದ್ದರೆ, ಬರುವ ಡಿಸೆಂಬರ್ 1ರಂದು ಪತ್ನಿ ಅಶ್ವಿನಿ ಜತೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನ ಆಚರಿಸಿಕೊಳ್ಳಬೇಕಿತ್ತು. ಆದರೆ ಕ್ರೂರ ವಿಧಿಯಾಟದ ಮುಂದೆ ಪುನೀತ್ ಬಾರದ ಲೋಕಕ್ಕೆ ತೆರಳಿದ್ದಾರೆ. 'ಕರುನಾಡಿನ ರಾಜಕುಮಾರ'ನ ನಿಧನ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ, ವಂದಿತಾ ಹಾಗು ರಾಜ್ ಕುಟುಂಬಕ್ಕೆ ಅಲ್ಲದೇ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ನೋವುಂಟು ಮಾಡಿದೆ.

ABOUT THE AUTHOR

...view details