ಸಿನಿಮಾ ಟಾಕೀಸ್ಗಳಿಗೆ 50% ಪ್ರವೇಶ ವಿಧಿಸಿ ಸರ್ಕಾರ ಆದೇಶ ಹೊರಡಿಸಿದ್ದು ಈ ಸಂಬಂಧ ಕನ್ನಡ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗೆ ನೀಡಿರುವ ಆದೇಶದಿಂದ ಉಂಟಾಗುವ ಸಂಕಷ್ಟದ ಕುರಿತು ಸಿಎಂ ಜತೆ ಚರ್ಚಿಸಿ, ಈಗಷ್ಟೇ ಕನ್ನಡ ಚಿತ್ರರಂಗ ಹಳಿಗೆ ಮರಳುತ್ತಿದ್ದು, ಚೇತರಿಕೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಹೊಸ ನೀತಿ ಕನ್ನಡ ಚಿತ್ರರಂಗದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ. ಹಾಗಾಗಿ 100% ಆಸನ ಭರ್ತಿಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಪುನೀತ್ ಮನವಿಗೆ ಸ್ಪಂದಿಸಿದ ಸಿಎಂ, ಆದೇಶ ಹಿಂಪಡೆದು ಕೆಲ ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಿದ್ದಾರೆ. ಇದರಿಂದಾಗಿ ಕನ್ನಡ ಚಿತ್ರರಂಗ ಹಾಗೂ ಪುನೀತ್ ಅಭಿಮಾನಿಗಳು ಸಂತಸದಲ್ಲಿದ್ದಾರೆ. ಹಾಗಂತ ಹೆಚ್ಚು ಖುಷಿಪಡುವ ಹಾಗಿಲ್ಲ. ಏಕೆಂದರೆ, 'ಯುವರತ್ನ' ಚಿತ್ರವೆನೋ ಇನ್ನೂ ಮೂರು ದಿನಗಳ ಕಾಲ ಶೇ. 100 ರಷ್ಟು ಹಾಜರಾತಿಯಲ್ಲಿ ಪ್ರದರ್ಶನವಾಗುತ್ತದೆ. ಅದರ ನಂತರ ಮುಂದೇನು? ಎಂಬ ಪ್ರಶ್ನೆ ಎಲ್ಲರಿಗೂ ಎದುರಾಗಿದೆ.
ಹೌದು, ಏಪ್ರಿಲ್ 7ರ ಒಳಗೆ 100% ಆಸನ ಭರ್ತಿಗೆ ಅವಕಾಶ ಕಲ್ಪಿಸಲಾಗಿದ್ದು, ನಂತರ 50% ಸೀಟು ಭರ್ತಿಗೆ ಸರ್ಕಾರ ಘೋಷಿಸಿದೆ. 'ಯುವರತ್ನ' ನಂತರ ಇನ್ನಷ್ಟು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಪ್ರಮುಖವಾಗಿ, 'ಕೊಡೆ ಮುರುಗ', 'ಕೃಷ್ಣ ಟಾಕೀಸ್', 'ನಿನ್ನ ಸನಿಹಕೆ', 'ಸಲಗ', 'ಕೋಟಿಗೊಬ್ಬ 3' ಸೇರಿದಂತೆ ಹಲವು ಚಿತ್ರಗಳು ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಈ ಎಲ್ಲಾ ಚಿತ್ರಗಳು ಮೊದಲು ಅಂದುಕೊಂಡಂತೆ ಬಿಡುಗಡೆಯಾಗುತ್ತವಾ? ಅಥವಾ ಶೇ. 100ರಷ್ಟು ಅನುಮತಿ ಸಿಕ್ಕ ನಂತರವೇ ಬಿಡುಗಡೆಯಾಗುತ್ತವಾ? ಎಂಬ ಅನುಮಾನ ಮೂಡಿದೆ.