ಡಾ. ರಾಜ್ಕುಮಾರ್ ಹಾಗೂ ಎನ್.ಟಿ. ರಾಮರಾವ್ ಕುಟುಂಬಕ್ಕೆ ಬಹಳ ವರ್ಷಗಳ ಸ್ನೇಹ ಇರುವುದು ಎಲ್ಲರಿಗೂ ತಿಳಿದ ವಿಷಯ. ಅದು ಅವರ ಮುಂದಿನ ತಲೆಮಾರಿಗೆ ಕೂಡ ಹಬ್ಬಿರುವುದು ನಿಜ. ಬಾಲಕೃಷ್ಣ ಅವರು ಶಿವಣ್ಣ ಅವರ ಬಹುತೇಕ ಸಿನಿಮಾಗಳ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ. ಶಿವರಾಜ್ಕುಮಾರ್ ಕೂಡ ಬಾಲಕೃಷ್ಣ ಅವರ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಚಕ್ರವ್ಯೂಹ’ಕ್ಕೆ ಜ್ಯೂನಿಯರ್ ಎನ್ಟಿಆರ್ ಒಂದು ಸಾಂಗ್ಅನ್ನೂ ಹೇಳಿದ್ದಾರೆ.
ಕೋಟ್ಯಧಿಪತಿ ವೇದಿಕೆಯಲ್ಲಿ ಜ್ಯೂ. ಎನ್ಟಿಆರ್ ನೆನಪಿಸಿಕೊಂಡ ಪುನೀತ್ ರಾಜ್ಕುಮಾರ್ - ಪುನೀತ್ ರಾಜ್ಕುಮಾರ್ ಸಿನಿಮಾ
ನಿನ್ನೆಯ ಕನ್ನಡದ ಕೋಟ್ಯಧಿಪತಿ ಎಪಿಸೋಡ್ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತೆಲುಗು ನಟ ಜ್ಯೂನಿಯರ್ ಎನ್ಟಿಆರ್ ಹಾಗೂ ತಮ್ಮ ಸ್ನೇಹವನ್ನು ನೆನೆದರು. ತಮ್ಮ ‘ಚಕ್ರವ್ಯೂಹ’ ಸಿನಿಮಾಗೆ ಹಾಡು ಹೇಳಿದ ಜ್ಯೂ. ಎನ್ಟಿಆರ್ಗೆ ಧನ್ಯವಾದ ಕೂಡಾ ಅರ್ಪಿಸಿದರು.
ಇನ್ನು ಪುನೀತ್ ರಾಜ್ಕುಮಾರ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಭಾನುವಾರ ರಾತ್ರಿ ‘ಕನ್ನಡದ ಕೋಟ್ಯಧಿಪತಿ’ ಎಪಿಸೋಡ್ನಲ್ಲಿ ಹಾಟ್ ಸೀಟಿನಲ್ಲಿ ಕುಳಿತಿದ್ದ ತುಮಕೂರಿನ ತನ್ಮಯ ಅವರಿಗೆ ಒಂದು ಆಡಿಯೋ ಪ್ರಶ್ನೆ ಎದುರಾಯಿತು. ಪುನೀತ್ ರಾಜ್ಕುಮಾರ್ ಅಭಿನಯದ ‘ಚಕ್ರವ್ಯೂಹ’ ಸಿನಿಮಾದ 'ಗೆಳೆಯ ಗೆಳೆಯ ಗೆಲುವು ನಮ್ಮದಯ್ಯ' ಹಾಡನ್ನು ಕೇಳಿಸಿ ಆ ಹಾಡು ಹಾಡಿದ ಗಾಯಕ ಯಾರು ಎಂದು ಕೇಳಲಾಯಿತು. ಕಡೆಗೂ ತನ್ಮಯ ಆ ಧ್ವನಿ ಜ್ಯೂನಿಯರ್ ಎನ್ಟಿಆರ್ ಅವರದ್ದು ಎಂದು ಉತ್ತರಿಸಿದರು.
ನಂತರ ಜ್ಯೂ. ಎನ್ಟಿಆರ್ ನೆನಪಿಸಿಕೊಂಡ ಪುನೀತ್ ರಾಜಕುಮಾರ್ ಆತ ನನ್ನ ನೆಚ್ಚಿನ ಸ್ನೇಹಿತ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಸಹೋದರ ಇದ್ದಂತೆ ಎಂದು ಇಬ್ಬರ ಸ್ನೇಹವನ್ನು ನೆನೆದರು. ಜ್ಯೂನಿಯರ್ ಎನ್ಟಿಆರ್ ಅವರ ತಾಯಿ ಉಡುಪಿಯ ಕುಂದಾಪುರದವರು. 'ಚಕ್ರವ್ಯೂಹ' ಚಿತ್ರಕ್ಕೆ ಹಾಡು ಹೇಳುವಾಗ ತಾರಕ್ ತಾಯಿ ತಮ್ಮ ಮನೆಗೆ ಕರೆಸಿ ಒಳ್ಳೆ ಆತಿಥ್ಯ ನೀಡಿದ್ದರು. ನಮಗೆ ಇಷ್ಟವಾದ ಅಡುಗೆ ಮಾಡಿದ್ದರು ಎಂದು ಪುನೀತ್ ನೆನಪಿಸಿಕೊಂಡರು. ಅವರ ಸ್ನೇಹವನ್ನು ಎಂದಿಗೂ ಮರೆಯಲಾರೆ ಎಂದು ತಮ್ಮ ಚಿತ್ರಕ್ಕೆ ಹಾಡಿದ ಜ್ಯೂ. ಎನ್ಟಿಆರ್ಗೆ ಇದೇ ಸಂದರ್ಭದಲ್ಲಿ ಧನ್ಯವಾದ ಹೇಳಿದ್ರು.