ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತೆ ಕಿರುತೆರೆಗೆ ಬಂದಿದ್ದಾರೆ. ಆದರೆ ಈ ಬಾರಿ ಅವರು ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಮಜಾ ಟಾಕೀಸ್' ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಜಾ ಟಾಕೀಸ್ ಕಳೆದ ಶನಿವಾರದಿಂದ 3ನೇ ಸೀಸನ್ ಆರಂಭಿಸಿದೆ. ಲಾಕ್ ಡೌನ್ ಸಡಿಲಿಕೆ ನಂತರ ಒಂದೊಂದಾಗಿ ಚಿತ್ರರಂಗ ಹಾಗೂ ಕಿರುತೆರೆ ಚಟುವಟಿಕೆಗಳು ಆರಂಭವಾಗುತ್ತಿದೆ. ಅದರಲ್ಲಿ ಮಜಾ ಟಾಕೀಸ್ ಸೀಸನ್ 3 ಕೂಡಾ ಒಂದು. ಆದರೆ ಈ ಬಾರಿ ಸುರಕ್ಷತೆ ದೃಷ್ಟಿಯಿಂದ ಲೈವ್ ಪ್ರೇಕ್ಷಕರಿಗೆ ಅವಕಾಶ ಇಲ್ಲ. ಕೇವಲ ಟಿವಿಯಲ್ಲಷ್ಟೇ ಅಭಿಮಾನಿಗಳು ಈ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.
ಕಳೆದ ವಾರ ನಟಿ ರಾಗಿಣಿ ದ್ವಿವೇದಿ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಮಜಾ ಮನೆಗೆ ಬಂದು ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಇದೀಗ ಪವರ್ ಸ್ಟಾರ್ ಸರದಿ. ಈ ಬಾರಿ ಪುನೀತ್ ರಾಜ್ಕುಮಾರ್ ವಿಶೇಷ ಅತಿಥಿ ಆಗಿ ಆಗಮಿಸಲಿದ್ದಾರೆ. ಮುಂದಿನ ವಾರದ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕಿರುತೆರೆ ವೀಕ್ಷಕರು ಹಾಗೂ ಅಪ್ಪು ಅಭಿಮಾನಿಗಳು ಈ ಎಪಿಸೋಡ್ ನೋಡಲು ಕಾತರಿಂದ ಕಾಯುತ್ತಿದ್ದಾರೆ. ಇದಕ್ಕೂ ಮುನ್ನ 'ರಾಜಕುಮಾರ' ಸಿನಿಮಾ ಬಿಡುಗಡೆ ವೇಳೆ ಅಪ್ಪು ಮಜಾ ಟಾಕೀಸ್ಗೆ ಬಂದು ಹೋಗಿದ್ದರು. ಇದೀಗ ಮತ್ತೆ ಎರಡನೇ ಬಾರಿಗೆ ಪುನೀತ್ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಹೇಳಬೇಕೆಂದರೆ ಪವರ್ ಸ್ಟಾರ್ಗೆ ಕಿರುತೆರೆ ಹೋಸದೇನಲ್ಲ. ಕಿರುತೆರೆಯ ಖ್ಯಾತ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ ತಾನೊಬ್ಬ ಉತ್ತಮ ನಿರೂಪಕ ಎಂಬುದನ್ನು ಪುನೀತ್ ಈಗಾಗಲೇ ಪ್ರೂವ್ ಮಾಡಿದ್ದಾರೆ. ಅದರೊಂದಿಗೆ ಫ್ಯಾಮಿಲಿ ಪವರ್ ಕಾರ್ಯಕ್ರಮವನ್ನು ಕೂಡಾ ಪುನೀತ್ ನಡೆಸಿಕೊಟ್ಟಿದ್ದರು.