ಬೆಂಗಳೂರು: ಕೊರೊನಾ 3ನೇ ಆತಂಕದ ನಡುವೆಯೇ ಚಿತ್ರಮಂದಿರಗಳಲ್ಲಿ ರಾಜ್ಯ ಸರ್ಕಾರ ಶೇ.100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದೆ. ಈ ಬೆನ್ನಲೇ ಮುಂದಿನ ತಿಂಗಳಿಂದ ಸಾಲು-ಸಾಲು ಚಿತ್ರಗಳು ತೆರೆ ಕಾಣಲು ಸಜ್ಜಾಗಿವೆ. ಅದರಲ್ಲಿಯೂ ಸ್ಟಾರ್ ವ್ಯಾಲೂವಿರುವ ಚಿತ್ರಗಳು ಚಿತ್ರಮಂದಿರದ ಪರದೆ ಮೇಲೆ ಕಾಣಿಸಲು ಪೈಪೋಟಿ ನಡೆಸುತ್ತಿವೆ. ಇದರ ನಡುವೆಯೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾಗೆ ಪೈರಸಿ ಕಾಟ ಶುರುವಾಗಿದೆ. ಈ ಬಗ್ಗೆ ಕೋಟ್ಯಂತರ ರೂ. ಬಂಡವಾಳ ಹಾಕಿರುವ ಚಿತ್ರ ನಿರ್ಮಾಪಕ ಸೂರಪ್ಪಬಾಬು ಅಳಲು ತೋಡಿಕೊಂಡಿದ್ದಾರೆ.
ನಿರ್ಮಾಪಕ ಸೂರಪ್ಪಬಾಬು ಪ್ರತಿಕ್ರಿಯೆ ಇದನ್ನೂ ಓದಿ:ಕೋಟಿಗೊಬ್ಬ 3, ಸಲಗ ಒಂದೇ ದಿನ ದರ್ಶನ: ನಾಡಹಬ್ಬಕ್ಕೆ ಸಿನಿರಸದೌತಣ
ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೋಟಿಗೊಬ್ಬ-3 ಸಿನಿಮಾ ಪೈರಸಿ ಮಾಡುವುದಾಗಿ ಬೆದರಿಕೆ ಸಂದೇಶ ಬರುತ್ತಿವೆಯಂತೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ನಿರ್ಮಾಪಕ ಸೂರಪ್ಪ ಬಾಬು ಪತ್ರ ಬರೆದಿದ್ದಾರೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಸಿನಿಮಾ ತಂಡ ಸೈಬರ್ ಕ್ರೈಂ ಮೊರೆ ಹೋಗಿದೆ. ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಗೂ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ಮಾಪಕ ಸೂರಪ್ಪಬಾಬು ಕೊರೊನಾ ಬಿಕ್ಕಟ್ಟು ಹಿನ್ನೆಲೆಯಲ್ಲಿ ಬಹು ತಿಂಗಳುಗಳ ಬಳಿಕ ಕನ್ನಡ ಚಿತ್ರಗಳು ಮುಂದಿನ ತಿಂಗಳಿನಿಂದ ತೆರೆ ಕಾಣುತ್ತಿವೆ. ಕೋಟಿಗೊಬ್ಬ-3 ಚಿತ್ರವನ್ನು ಪೈರಸಿ ಮಾಡುವುದಾಗಿ ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ಸುಮಾರು 50 ಜನರು ಪೈರಸಿ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗೃಹ ಸಚಿವರಿಗೆ ಹಾಗೂ ಕಮಿಷನರ್ ಕಮಲ್ ಪಂತ್ಗೆ ದೂರು ನೀಡಿದ್ದೇನೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಯೂಟ್ಯೂಬ್ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್...ನಿರ್ಮಾಪಕ ಸೂರಪ್ಪ ಬಾಬು ಪ್ರತಿಕ್ರಿಯೆ