ಸುಮಧುರ ಕಂಠಸಿರಿಯ ಮೂಲಕ ಇಂಡಿಯನ್ ಐಡಲ್ ಸಂಗೀತ ರಿಯಾಲಿಟಿ ಶೋ 12ನೇ ಆವೃತ್ತಿ ಫೈನಲ್ಗೆ ಲಗ್ಗೆ ಹಾಕಿದ್ದ ಕನ್ನಡಿಗ ನಿಹಾಲ್ಗೆ ನಿರಾಸೆಯಾಗಿದೆ. ಸುಮಾರು 12 ಗಂಟೆಗಳ ಕಾಲ ನಡೆದ ಫೈನಲ್ ಕಾರ್ಯಕ್ರಮದಲ್ಲಿ ಪವನ್ದೀಪ್ ರಂಜನ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಹಿಂದಿಯ ಖ್ಯಾತ ರಿಯಾಲಿಟಿ ಶೋ "ಇಂಡಿಯನ್ ಐಡಲ್" ಕಾರ್ಯಕ್ರಮದಲ್ಲಿ ಒಟ್ಟು 40 ಸ್ಪರ್ಧಿಗಳು 200ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಆದರೆ ಫೈನಲ್ಗೆ ಕನ್ನಡಿಗ ನಿಹಾಲ್ ತಾವ್ರೋ ಸೇರಿದಂತೆ 10 ಯುವ ಗಾಯಕರು ಲಗ್ಗೆ ಹಾಕಿದ್ದರು. ಅದರಲ್ಲಿ ಪವನ್ದೀಪ್, ಅರುಣಿತ ಕಂಜಿಲಾಲ್, ಮೊಹ್ಮದ್ ಡ್ಯಾನಿಶ್, ಷಣ್ಮುಖಪ್ರಿಯ, ನಿಹಾಲ್ ತಾವ್ರೋ ಮತ್ತು ಸಾಯ್ಲಿ ಕಾಂಬ್ಳೆ ಪ್ರಮುಖ ಸ್ಪರ್ಧಿಗಳಾಗಿದ್ದರು.
ಆಗಸ್ಟ್ 15ರ ಮಧ್ಯಾಹ್ನ 12ಗಂಟೆಗೆ ಆರಂಭಗೊಂಡಿದ್ದ ಕಾರ್ಯಕ್ರಮ ಮಧ್ಯರಾತ್ರಿವರೆಗೂ ಮುಂದುವರೆದಿತ್ತು. ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಪವನ್ ದೀಪ್ ಅವರಿಗೆ 25 ಲಕ್ಷ ರೂ. ನಗದು ಬಹುಮಾನ ಹಾಗೂ ಮಾರುತಿ ಸುಜುಕಿ ಕಾರು ಸ್ವಿಫ್ಟ್ ನೀಡಲಾಗಿದೆ.