ಜಸ್ಟ್ ಮಾತ್ ಮಾತಲ್ಲಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಶರತ್ ಅವರು ಇಂದು ಪಾರು ಧಾರಾವಾಹಿಯ ಆದಿಯಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ.
ಇಂಜಿನಿಯರಿಂಗ್ ಓದಿ ಐಟಿ ಸೆಕ್ಟರ್ನಲ್ಲಿ ಕೆಲಸ ಮಾಡುತ್ತಿದ್ದ ಶರತ್ ಅವರನ್ನು ನಟನೆ ಕೈ ಬೀಸಿ ಕರೆಯಿತು. ಅದ್ಯಾವಾಗ ಖಾಸಗಿ ವಾಹಿನಿಯೊಂದು ಸ್ವತಃ ಶರತ್ ಅವರನ್ನು ಸಂಪರ್ಕಿಸಿ ನಟಿಸುತ್ತೀರಾ ಎಂದು ಕೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು.
ಮುಂದೆ ರಾಧಾ ರಮಣ ಧಾರಾವಾಹಿಯಲ್ಲಿ ಅಭಿ ಪಾತ್ರದಲ್ಲಿ ನಟಿಸಿದ್ದ ಶರತ್ ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚಿದರು. ಪುಟ್ಮಲ್ಲಿ ಧಾರಾವಾಹಿಯ ಅಭಯ್ ಪಾತ್ರಕ್ಕೆ ಸಾಕಷ್ಟು ಜನಪ್ರಿಯತೆಯೂ ಕೂಡಾ ದೊರಕಿತ್ತು. ಮಾತ್ರವಲ್ಲ ಮುಂದೆ ಅವಕಾಶಗಳ ಮಹಾಪೂರವೇ ಅವರನ್ನು ಅರಸಿ ಬಂದಿತು.
ಪಾರು ಧಾರಾವಾಹಿಯಲ್ಲಿ ತಂದೆ - ತಾಯಿಗೆ ತಕ್ಕ ಮಗನಾದ ಆದಿತ್ಯನಿಗೆ ಅವರೆಂದರೆ ಪ್ರಾಣ. ತಮ್ಮ ಪ್ರೀತು ಎಂದರೆ ಪ್ರೀತಿ ಜಾಸ್ತಿ. ಬಹುದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿ ಗುರುತಿಸಿಕೊಂಡಿರುವ ಆದಿತ್ಯನ ಪಾತ್ರಕ್ಕೆ ಮನ ಸೋಲದವರಿಲ್ಲ. ಕಿರುತೆರೆಯಲ್ಲಿ ಕೇವಲ ಮೂರು ನಾಲ್ಕು ಧಾರಾವಾಹಿಗಳಲ್ಲಷ್ಟೇ ಶರತ್ ಅವರು ನಟಿಸಿದ್ದರೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನೀವು ಕರೆ ಮಾಡಿರುವ ಚಂದಾದಾರರು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿರುವ ಶರತ್ ಪದ್ಮನಾಭ್ ಸದ್ಯ ನಟನಾ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.