ಉದಯ ವಾಹಿನಿ ಎರಡು ಹೊಸ ಧಾರಾವಾಹಿಗಳನ್ನು ಆರಂಭಿಸುತ್ತಿದೆ. ಮಾರ್ಚ್ 15 ರಿಂದ ಕಾಮಿಡಿ, ಸಸ್ಪೆನ್ಸ್ ಕಥೆ ಹೊಂದಿರುವ 'ಗೌರಿಪುರದ ಗಯ್ಯಾಳಿಗಳು' ಹಾಗೂ 'ನೇತ್ರಾವತಿ' ಎಂಬ ಎರಡು ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಲಿದೆ. ಈ ಎರಡೂ ಧಾರಾವಾಹಿಗಳು ವಿಭಿನ್ನ ಕಥೆ ಹೊಂದಿದ್ದು ಕಿರುತೆರೆಪ್ರಿಯರು ಈ ಧಾರಾವಾಹಿಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಗೌರಿಪುರದ ಗಯ್ಯಾಳಿಗಳು
ಗೌರಿಪುರ ಎಂಬಲ್ಲಿ ವಾಸಿಸುವ ನಾಲ್ವರು ಮಧ್ಯಮವರ್ಗದ ಮಹಿಳೆಯರು, ಸ್ತ್ರೀ ಸಂಘ ಸ್ಥಾಪಿಸಿಕೊಂಡು ಹಪ್ಪಳ-ಸಂಡಿಗೆ ತಯಾರು ಮಾಡುತ್ತಿರುತ್ತಾರೆ. ಇವರನ್ನು ಕಂಡರೆ ಇಡೀ ಕಾಲೊನಿಯೇ ಹೆದರುತ್ತದೆ. ಈ ನಾಲ್ವರ ನಡುವೆಯೇ ಹಲವು ಸಮಸ್ಯೆಗಳಿವೆ. ಆದರೆ ಹೊರಗಿನವರಿಂದ ಸಮಸ್ಯೆ ಆದರೆ ಇವರು ಒಗ್ಗಟ್ಟಾಗುತ್ತಾರೆ. ಈ ನಾಲ್ವರನಡುವೆ ನಡೆಯುವ ಕಥೆಯನ್ನೇ ಧಾರಾವಾಹಿಯಲ್ಲಿ ತೋರಿಸಲಾಗಿದೆ. ರವಿತೇಜ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ನವ್ಯ, ರೋಹಿಣಿ, ದಿವ್ಯ, ವೀಣಾ, ರಚನಾ, ಆರ್ವ ಬಸವಟ್ಟಿ, ರವಿತೇಜ ಹಾಗೂ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ತಮ್ಮ ʻಸುರಾಗ್ ಪ್ರೊಡಕ್ಷನ್ಸ್' ಲಾಂಛನದಲ್ಲಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಅವರ ಮೊದಲ ಪ್ರಯತ್ನ. ಧಾರಾವಾಹಿ ಮಾರ್ಚ್ 15 ರಿಂದ ಸೋಮವಾರದಿಂದ ಶನಿವಾರದವರೆಗೂ ಸಂಜೆ 6. 30ಕ್ಕೆ ಪ್ರಸಾರವಾಗಲಿದೆ.
ನೇತ್ರಾವತಿ
ಇದೊಂದು ಭಕ್ತಿ ಪ್ರಧಾನ ಧಾರಾವಾಹಿ. ತನ್ನೊಳಗೆ ನೋವಿದ್ದರೂ ಅದನ್ನು ತೋರಿಸಿಕೊಳ್ಳದೆ ಇತರರಿಗೆ ನಗು ಹಂಚುವ ಆಶಾ ಕಾರ್ಯಕರ್ತೆ, ಮಂಜುನಾಥ ಸ್ವಾಮಿಯ ಭಕ್ತೆ ನೇತ್ರಾವತಿ. ವೃತ್ತಿ ಜೀವನದ ಏರಿಳಿತಗಳು ಇವಳನ್ನು ಒಬ್ಬ ಒರಟ ನಾಯಕನ ಮನೆವರೆಗೂ ತಂದು ನಿಲ್ಲಿಸುತ್ತದೆ.ಆತನಿಂದ ಮುಗ್ಧೆ ನೇತ್ರಾವತಿ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಾಳೆ...? ಆ ಸಮಸ್ಯೆಯಿಂದ ಹೇಗೆ ಹೊರಬರುತ್ತಾಳೆ...? ಎಂಬುದು ಈ ಧಾರಾವಾಹಿಯ ಕಥೆ. ಪೂರ್ಣಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ 'ನೇತ್ರಾವತಿʼ ಧಾರಾವಾಹಿ ಮೂಡಿಬರಲಿದೆ. ಸಂತೋಷ್ ಗೌಡ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ದುರ್ಗಾಶ್ರೀ, ಸನ್ನಿ ಮಹಿಪಾಲ್, ಸಚಿನ್, ಚೈತ್ರಾ ರಾವ್, ದಾನಪ್ಪ, ಐಶ್ವರ್ಯ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:ತೆಲುಗಿನ ಖ್ಯಾತ ನಿರ್ಮಾಪಕರ ಪಾಲಾಯ್ತು 'ಯುವರತ್ನ' ಸಿನಿಮಾದ ವಿತರಣೆ ಹಕ್ಕು
ವಿಶೇಷ ಎಂದರೆ ಈ ಧಾರಾವಾಹಿ ಮೂಲಕ ನಟಿ ಅಂಜಲಿ ಸುಮಾರು 2 ದಶಕಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅಂಜಲಿ ಅನಂತನ ಅವಾಂತರ, ತರ್ಲೆ ನನ್ನ ಮಗ, ನೀನು ನಕ್ಕರೆ ಹಾಲು ಸಕ್ಕರೆ ಸೇರಿ ಅನೇಕ ಸಿನಿಮಾಗಳ ಮೂಲಕ ಹೆಸರು ಮಾಡಿದವರು.ಈ ಧಾರಾವಾಹಿಯಲ್ಲಿ ಅಂಜಲಿ, ನೇತ್ರಾವತಿ ತಾಯಿ ಭಾಗೀರಥಿಯಾಗಿ ನಟಿಸುತ್ತಿದ್ದಾರೆ. 'ನೇತ್ರಾವತಿ' ಧಾರಾವಾಹಿ ಮಾರ್ಚ್ 15 ರಿಂದ ಸೋಮವಾರದಿಂದ ಶನಿವಾರದವರೆಗೂ ಸಂಜೆ 7.30 ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಮಾರ್ಚ್ 15 ರಿಂದ ಪ್ರಸಾರವಾಗಲಿರುವ 'ಗೌರಿಪುರದ ಗಯ್ಯಾಳಿಗಳು'